ಹೊಸಪೇಟೆ: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಅಂಜುಮಾನ್ ಜಿದ್ಮತೆ ಇಸ್ಲಾಂ ಕಮಿಟಿಯ ನೇತೃತ್ವದಲ್ಲಿ ಸಾವಿರಾರು ಸ್ಥಳೀಯ ಮುಸ್ಲಿಂ ಸಮುದಾಯದವರು ನಗರದ ತಹಸೀಲ್ ಕಚೇರಿ ಮುಂದೆ ಶುಕ್ರವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ಕಾಯಿದೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ನಗರದ ಈದ್ಗಾ ಮೈದಾನದಿಂದ ಮೆರವಣಿಗೆ ಆರಂಭಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ತಹಸೀಲ್ ಕಚೇರಿ ಮುಂದೆ ರಸ್ತೆ ತಡೆದು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರಮೋದಿ, ಅಮಿತ್ ಷಾ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು. ವಕ್ಫ್ ತಿದ್ದುಪಡಿ ಮಸೂದೆ ಭಾರತದ ಸಂವಿಧಾನದ ಮೇಲಿನ ದಾಳಿಯಾಗಿದೆ. ಅಲ್ಪಸಂಖ್ಯಾತರನ್ನು ಅವಮಾನಿಸಲು, ಅವರ ಹಕ್ಕುಗಳನ್ನು ಕಿತ್ತುಕೊಳ್ಳುವುದು ಕೇಂದ್ರ ಸರ್ಕಾರದ ಹುನ್ನಾರವಾಗಿದೆ. ಭಾರತೀಯ ಸಮಾಜವನ್ನು ವಿಭಜಿಸುವ ಗುರಿ ಹೊಂದಿದ್ದರಿಂದ 2025ರ ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕದೆ ರದ್ದುಗೊಳಿಸುವಂತೆ ಒತ್ತಾಯಿಸಿದರು.
ಬಿಜೆಪಿಯವರು ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂದು ಹೇಳುತ್ತಾರೆ. ಆದರೆ, ಒಂದು ಸಮುದಾಯವನ್ನು ಗುರಿಯಾಗಿಸಿ ತಾರತಮ್ಯ ಮಾಡಲಾಗುತ್ತಿದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಮುದಾಯ ಆರೋಪಿಸಿದರು. ಸಂವಿಧಾನದ ಮೂಲ ಆಶಯದ ವಿರುದ್ಧವಾಗಿರುವ ಕಾಯ್ದೆಯನ್ನು ಬಲವಾಗಿ ಖಂಡಿಸುತ್ತೇವೆ. ಈ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಯಾಗದಂತೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹುಡಾ ಅಧ್ಯಕ್ಷ ಎಚ್.ಎನ್. ಎಫ್.ಇಮಾಮ್ ನಿಯಾಜಿ, ಡಾ.ಮೈನುದ್ದೀನ್ ದುರ್ವೇಶ್, ಬಡಾವಲಿ, ಫಿರೋಜ್ ಖಾನ್, ಸದ್ದಾಮ್ ಹುಸೇನ್, ಗಚ್ಛ ಖಾದರ್, ಖಾಜಾ ಮಹಮ್ಮದ್ ನಿಯಾಜ, ಇತರೆ ಸಂಘಟನೆಯ ಪ್ರಮುಖರಾದ ರಾಮಚಂದ್ರಪ್ಪ, ಭಾಸ್ಕರ್ ರೆಡ್ಡಿ, ಜಂಬಯ್ಯ ನಾಯಕ, ಕರುಣಾನಿಧಿ ಇತರರಿದ್ದರು.