ಹೊಸಪೇಟೆ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿರುವ ಮಾವಿನ ಹಣ್ಣುಗಳು 
ಜಿಲ್ಲೆ

ಹೊಸಪೇಟೆಯಲ್ಲಿ ಹಣ್ಣುಗಳ ಮಹಾರಾಜನ ದರ್ಬಾರ್

ಮಂಜುನಾಥ

ಹೊಸಪೇಟೆ: ಋತುಮಾನಕ್ಕೆ ತಕ್ಕಂತೆ ಪ್ರಕೃತಿಯಲ್ಲೂ ಬದಲಾವಣೆ ಕಾಣುತ್ತದೆ. ಒಂದೊಂದು ಕಾಲದಲ್ಲಿ ಒಂದೊಂದು ತರಹದ ಹಣ್ಣುಗಳು ಬರುತ್ತವೆ. ಚಳಿಗಾಲದಲ್ಲಿ ಸೀತಾಫಲ ಹಣ್ಣುಗಳ ದರ್ಬಾರ್ ನಡೆದರೆ, ಬೇಸಿಗೆಯಲ್ಲಿ ಹಣ್ಣುಗಳ ರಾಜನ ವೈಭವ.

ಇದೀಗ ಸುಡುತ್ತಿರುವ ಬಿಸಿಲಿನ ಝಳದಿಂದ ನೆಮ್ಮದಿ ನೀಡಲು ಮಾವಿನ ಹಣ್ಣುಗಳು ಪೇಟೆಗೆ ಬಂದಿವೆ. ಎಲ್ಲಿ ನೋಡಿದರಲ್ಲಿ ಮಾವಿನ ಹಣ್ಣುಗಳದ್ದೇ ವಹಿವಾಟು. ಚಿಕ್ಕು, ಪೇರಲ, ಬಾಳೆ, ಕಲ್ಲಂಗಡಿ, ಕರಬೂಜ್, ಸೇಬು ಹಣ್ಣುಗಳ ನಡುವೆ ಮಾವಿನ ಹಣ್ಣುಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಅಂತೆಯೇ ನಗರದಾದ್ಯಂತ ಮಾವಿನ ಹಣ್ಣುಗಳ ಆವಕವೂ ಹೆಚ್ಚಾಗುತ್ತಿದೆ. ಬೇಸಿಗೆ ಬಂದೊಡನೆ ನೆನಪಾಗುವ ಮಾವಿನ ಹಣ್ಣುಗಳ ರುಚಿ ಸವಿಯುವುದೇ ಒಂದು ಹಬ್ಬ. ಅದಕ್ಕಾಗಿಯೇ ಮಾವಿಗೆ ಹಣ್ಣುಗಳ ರಾಜನೆಂಬ ಬಿರುದು. ಹೀಗಾಗಿ ಪ್ರತಿಯೊಬ್ಬರೂ ಮಾವಿನ ಹಣ್ಣುಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ದುಪ್ಪಟ್ಟು ಬೇಲೆ


ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಮಾರುಕಟ್ಟೆಗೆ ತರಹೇವಾರಿ ಹಣ್ಣುಗಳು ಲಗ್ಗೆ ಇಡುತ್ತವೆ. ಅದರಲ್ಲಿ ಮುಖ್ಯ ಆಕರ್ಷಣೆಯೇ ಮಾವು. ಬೇರೆ ದೇಶ, ಉತ್ತರ ಭಾರತದಿಂದ ಆಮದು ಮಾಡಿಕೊಳ್ಳಲಾಗುವ ಸೇಬಿನ ದರ 200 ರೂ. ಆಸುಪಾಸಿನಲ್ಲೇ ಇರುತ್ತದೆ. ಆದರೆ, ಸರ್ವೆ ಸಾಮಾನ್ಯವಾಗಿ ನಮ್ಮ ಮನೆ ಅಕ್ಕಪಕ್ಕ, ಜಮೀನುಗಳಲ್ಲಿ ಬೆಳೆಯುವ ಮಾವಿಗೂ ಮಾರುಕಟ್ಟೆಯಲ್ಲಿ ಸೇಬಿನ ವರ್ಚಸ್ಸು ಬಂದಿದೆ. ಇನ್ನೆರಡು ವಾರದಲ್ಲಿ ಆಂಧ್ರ ಪ್ರದೇಶದಿಂದಲೂ ವಿವಿಧ ಪ್ರಭೇದದ ಮಾವು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಆಗ ಸ್ವಲ್ಪ ಪ್ರಮಾಣದಲ್ಲಿ ದರ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ. ಈಗಂತೂ ಮಾವು ಗ್ರಾಹಕರ ಜೇಬು ಸುಡುತ್ತಿದ್ದು, ದರ ಕಳೆದ ವರ್ಷದ ಹೋಲಿಕೆಯಲ್ಲಿ ದುಪ್ಪಟ್ಟು ಆಗಿದೆ. ಕಳೆದ ವರ್ಷ ಇದೇ ಹೊತ್ತಿಗೆ ಮಾವಿನ ಬೆಲೆ ಕೆಜಿಗೆ 100-120 ರೂ. ಇತ್ತು. ಈಗ 200 ರೂ. ಇದೆ. ಹೀಗೆ ಎಲ್ಲಪ್ರಭೇದದ ಮಾವುಗಳ ಬೆಲೆ ಶೇ.50ರಷ್ಟು ಏರಿಕೆಯಾಗಿದೆ. ಆದರೂ ಖರೀದಿ ಪ್ರಮಾಣದಲ್ಲಿ ಇಳಿಕೆ ಆಗಿಲ್ಲ ಎನ್ನುತ್ತಾರೆ ಹಣ್ಣು ವ್ಯಾಪಾರಿಗಳು.

ಉಪ್ಪಿನಕಾಯಿ ದರವೂ ಹೆಚ್ಚಳ?


ಮಾವಿನಕಾಯಿಯಿಂದ ಉಪ್ಪಿನಕಾಯಿ ತಯಾರಿಸುವ ಮಾರುಕಟ್ಟೆ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಕರ್ನಾಟಕ ಮಾತ್ರವಲ್ಲದೇ ನೆರೆಯ ರಾಜ್ಯಗಳಿಂದಲೂ ಮಾವಿನ ಕಾಯಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಸಲ ಇದರ ಮೇಲೆಯೂ ಪರಿಣಾಮ ಬೀರಲಿದೆ. ಪ್ರತಿವರ್ಷ 9-10 ರೂ. ಇರುತ್ತಿದ್ದ ಮಾವು ಈ ಸಲ 14-15 ರೂ. ಆಗುವ ಸಾಧ್ಯತೆ ಇದೆ. ಮಾವಿನಕಾಯಿಯ ಬೆಲೆಯು ಶೇ.30-40 ಹೆಚ್ಚಳವಾಗಿದೆ. ಬರುವ ದಿನಗಳಲ್ಲಿ ಇದು ಉಪ್ಪಿನಕಾಯಿ ದರ ಹೆಚ್ಚಳಕ್ಕೂ ಕಾರಣವಾಗಲಿದೆ.

ಒಂದು ಮಾವು ಬಳಕೆ ಹಲವು


ಹಸಿದು ಹಲಸು ತಿನ್ನು; ಉಂಡು ಮಾವು ತಿನ್ನು’ ಎಂಬ ಗಾದೆ ಮಾವಿನ ಸಾಂಸ್ಕೃತಿಕ ಮಾನ್ಯತೆಯನ್ನು ಎತ್ತಿ ಹಿಡಿಯುತ್ತದೆ. ಯುಗಾದಿ ನಂತರ ಬರುವ ಹಲವು ಹಬ್ಬ- ಹರಿದಿನಗಳಲ್ಲಿ ಹೋಳಿಗೆ ಜತೆ ಮಾವಿನ ಹಣ್ಣಿನ ಸೀಕರಣೆ ಎಲ್ಲರಿಗೂ ಬಹು ಇಷ್ಟ. ಅದೇ ರೀತಿ, ಮಾವಿನ ಜ್ಯೂಸ್‌ಗೂ ಬಹುದೊಡ್ಡ ಮಾರುಕಟ್ಟೆ ಇದೆ. ಉಪ್ಪಿನಕಾಯಿಗೆ ನಾಟಿ ಪ್ರಭೇದದ ಮಾವನ್ನೇ ಪ್ರಧಾನವಾಗಿ ಬಳಸಲಾಗುತ್ತದೆ. ಈ ಸಲ ಕಾಯಿಯ ಬೆಲೆ ಶೇ.30-40 ಏರಿಕೆಯಾಗಿದೆ.