ಜಿಲ್ಲೆ

ವಾಲ್ಮೀಕಿ ರಾಮಾಯಣ ಶ್ಲೋಕದ ಧ್ವನಿ ಸುರುಳಿ ಅ.20ಕ್ಕೆ ಬಿಡುಗಡೆ: ರಂಗಕರ್ಮಿ ಚಂದ್ರಶೇಖರ್ ಮಾಹಿತಿ

ಹೊಸಪೇಟೆ: ವಾಲ್ಮೀಕಿ ರಾಮಾಯಣ ಶ್ಲೋಕವನ್ನು ಸಂಗೀತ ರೂಪದಲ್ಲಿ ಪರಿವರ್ತನೆ ಮಾಡಲಾಗಿದ್ದು, ಅ.20ರಂದು ಜಿಲ್ಲಾಡಳಿತ ಹಮ್ಮಿಕೊಂಡಿರುವ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಧ್ವನಿಸುರುಳಿ ಬಿಡುಗಡೆ ಮಾಡಲಾಗುವುದು ಎಂದು ರಂಗಕರ್ಮಿ ಎಸ್.ಎಸ್.ಚಂದ್ರಶೇಖರ್ ಹೇಳಿದರು.

ಜಗತ್ತು ಇರೋವರೆಗೂ ರಾಮಾಯಣದ ಎಲ್ಲ ಪಾತ್ರವನ್ನು ಸ್ಮರಿಸುವ ಜತೆ ಅದರ ಕರ್ತೃ ವಾಲ್ಮೀಕಿಯನ್ನು ನೆನೆಯಬೇಕು. ವಂದೇ ವಾಲ್ಮೀಕಿ ಕೋಕಿಲಂ ಎಂದು ಶ್ಲೋಕವನ್ನು ರಾಗದ ರೂಪದಲ್ಲಿ ಎಲ್ಲೂ ನೋಡಿಲ್ಲ. ಅಂಥ ಕಾರ್ಯವನ್ನು ಈಗ ಪೂರ್ಣಗೋಳಿಸಿದ್ದೇವೆ. ಅ.25ರಿಂದ ಯುಟೂಬ್‌ನಲ್ಲಿ ವೀಕ್ಷಣೆ ಹಾಗೂ ಡೌನ್‌ಲೋಡ್ ಮಾಡಬಹುದು. ಅಯೋಧ್ಯೆಯ ರಾಮಮಂದಿರದಲ್ಲಿ ವಾಲ್ಮೀಕಿ ಗುಡಿಯ ಜತೆ ಈ ಶ್ಲೋಕ ಕೂಡ ಪಠಣ ಆಗಬೇಕು. ಆದ್ದರಿಂದ ಎಲ್ಲರ ಸಹಕಾರ ಅಗತ್ಯವಿದೆ. ಸರ್ಕಾರದ ಜತೆಗೂ ಮಾತುಕತೆ ನಡೆಸುತ್ತಿದ್ದೇವೆ. ಒಂದು ನಿಮಿಷದ ಕಾಲರ್ ಟ್ಯೂನ್ ಮತ್ತು ರಿಂಗ್‌ಟ್ಯೂನ್ ಕೂಡ ಮಾಡಲಿದ್ದೇವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಾಲ್ಮೀಕಿ ಸಮುದಾಯದ ತಾಲೂಕು ಉಪಾಧ್ಯಕ್ಷ ನಾಣಿಕೇರಿ ತಿಮ್ಮಯ್ಯ, ಮುಖಂಡರಾದ ಬಂಡೆ ರಂಗಪ್ಪ, ಯಮನೂರಪ್ಪ, ಕನಕಪ್ಪ, ಕಂಪ್ಲಿ ಕಣಿಮೆಪ್ಪ, ಜಂಬಯ್ಯ ನಾಯಕ ಇತರರಿದ್ದರು.