ಹೊಸಪೇಟೆ: ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಔದ್ಯೋಗಿಕವಾಗಿ ಮುಂಚೂಣಿಗೆ ತರುವುದು ನಿಗಮದ ಮುಖ್ಯ ಉದ್ದೇಶ ಎಂದು ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜೆ.ಪಲ್ಲವಿ ಅಭಿಪ್ರಾಯಪಟ್ಟರು.
ಕನ್ನಡ ವಿವಿಯ ಪಂಪ ಸಭಾಂಗಣದಲ್ಲಿ ಗುರುವಾರ ಎಸ್ಸಿ-ಎಸ್ಟಿ ವಿಶೇಷ ಘಟಕ ಹಾಗೂ ಸರ್ಕಾರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಅಲೆಮಾರಿ ಸಮುದಾಯಗಳ ಸಮಸ್ಯೆ, ಸವಾಲುಗಳು ಮತ್ತು ಪರಿಹಾರೋಪಾಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಗುಡಿಸಲು, ಟೆಂಟು ಮತ್ತು ಜೋಪಡಿಯಲ್ಲಿ ವಾಸಿಸುವ ಅಲೆಮಾರಿ ಮತ್ತು ಬಡಕಟ್ಟು ಸಮುದಾಯದವರಿಗೆ ಶಾಶ್ವತವಾಗಿ ಒಂದು ನೆಲೆ ದೊರೆಯಬೇಕು. ಟೆಂಟು ಮುಕ್ತ ರಾಜ್ಯವನ್ನು ನಿರ್ಮಿಸುವುದು ನಿಗಮದ ಆದ್ಯತೆಯಾಗಿದೆ. ಸರ್ಕಾರವು ಅಲೆಮಾರಿ ಜನಾಂಗ ಬುಡಕಟ್ಟು ಸಮುದಾಯಗಳಿಗೆ ನೀಡುವ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ದೊರೆಯುವಲ್ಲಿ ಮಧ್ಯವರ್ತಿಗಳ ಹಾವಳಿ ಇತ್ತು. ಇಂತಹ ಲೋಪ ದೋಷಗಳನ್ನು ಗಮನಿಸಿ ನೇರವಾಗಿ ಯೋಜನೆಯ ಅನುಕೂಲವನ್ನು ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಆನ್‌ಲೈನ್ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದರು.
ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಎಂ.ಮೇತ್ರಿ ಮಾತನಾಡಿ, ಅಲೆಮಾರಿಗಳ ಸಮುದಾಯಗಳ ಅಭಿವೃದ್ಧಿಗೆ ಸಮಯವನ್ನು ನಿಗಧಿಪಡಿಸಬೇಕು. ಸರ್ಕಾರಗಳು ಜಾರಿಗೆ ತರುವ ವರದಿಯಲ್ಲಿ ತುಂಬಾ ಶೋಷಣೆಗೆ ಒಳಗಾದ ಅಲೆಮಾರಿ ಸಮುದಾಯಗಳು ಪಟ್ಟಿಯಿಂದ ಹೊರಹೋಗದಂತೆ ಅಭಿವೃದ್ಧಿ ನಿಗಮಗಳು ನೋಡಿಕೊಳ್ಳಬೇಕು ಎಂದರು.
ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ, ಉಪಕುಲಸಚಿವ ಬಿ.ಗುರುಬಸಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ.ಕಾಳೆ, ವಿವಿಯ ಪ್ರಾಧ್ಯಾಪಕರಾದ ಡಾ.ಎ.ಎಸ್.ಪ್ರಭಾಕರ, ಡಾ.ಮಾಧವ ಪೆರಾಜೆ, ಆನಂದ್ ಏಕಲವ್ಯ, ಡಾ.ಕೆ.ಗೀತಮ್ಮ ಇತರರಿದ್ದರು.