ಹೊಸಪೇಟೆ: ಪ್ರಾಚೀನ ಕರ್ನಾಟಕದ ಇತಿಹಾಸ, ಸಂಸ್ಕೃತಿಯನ್ನು ಅರಿತುಕೊಳ್ಳುವಲ್ಲಿ ವೀರಗಲ್ಲುಗಳು ಬಹುಮುಖ್ಯ ಆಕರಗಳಾಗಿವೆ ಎಂದು ಕನ್ನಡ ವಿವಿಯ ಸಂಶೋಧನಾರ್ಥಿ ಡಿ.ವೀರೇಶ ಹೇಳಿದರು.
ಕನ್ನಡ ವಿವಿಯ ಹಾಲುಮತ ಅಧ್ಯಯನ ಪೀಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹಾಲುಮತ ಮಂಟಪ-7 ಕಾರ್ಯಕ್ರಮದಲಿ ಸ್ಮಾರಕ ಶಿಲ್ಪಗಳಲ್ಲಿ ಕುರುಬ ವೀರರು ವಿಶೇಷ ಉಪನ್ಯಾಸ ನೀಡಿದರು.
ವೀರಗಲ್ಲುಗಳು ಯುದ್ಧದಲ್ಲಿ ಹೋರಾಡುತ್ತ ಮಡಿದ ವ್ಯಕ್ತಿಯ ನೆನಪಿಗಾಗಿ ಸ್ಥಾಪಿಸಿದ ಸ್ಮಾರಕಗಳಾಗಿವೆ. ಜತೆಗೆ ಹಸು, ನಾಯಿ ಮೊದಲಾದ ಪ್ರಾಣಿಗಳನ್ನು ಕಳ್ಳಕಾಕರಿಂದ ರಕ್ಷಣೆ ಮಾಡಿದವರ ನೆನಪಿಗಾಗಿಯೂ ವೀರಗಲ್ಲುಗಳು ನಮ್ಮಲ್ಲಿ ದೊರಕುತ್ತವೆ. ವೀರಗಲ್ಲುಗಳ ಮೂಲಕ ಪ್ರಾಚೀನ ಕುರುಬ ಸಮುದಾಯದ ವೀರರ ಶೌರ್ಯ, ಸಾಹಸಗಳನ್ನು ಕಂಡುಕೊಳ್ಳಬಹುದಾಗಿದೆ. ಹಡಗಲಿ ತಾಲೂಕು ಹೊಳಗುಂದಿ, ಪುರ, ಉತ್ತಂಗಿ, ಗ್ರಾಮಗಳಲ್ಲಿ ಕುರುಬ ವೀರರು ಇದ್ದರು ಎಂಬುದನ್ನು ಅಲ್ಲಿ ಶೋಧಗೊಂಡ ಶಿಲ್ಪಗಳು ಹೇಳುತ್ತವೆ. ಕುರಿಗಳ ರಕ್ಷಣೆಗಾಗಿ ಹುಲಿಯೊಂದಿಗೆ ಹೋರಾಡಿದ ವೀರನ ಚರಿತ್ರೆಯನ್ನು ಶಿಲ್ಪವೊಂದು ವಿವರಿಸುತ್ತದೆ. ಹಾಗೆಯೇ ಟಗರು ಕಾಳಗ ನಡೆಯುತ್ತಿದ್ದ ಬಗ್ಗೆ ಹಂಪಿಯ ವಿಠಲ ದೇವಸ್ಥಾನದ ಕಂಬವೊAದರಲ್ಲಿ ಕೆತ್ತಿರುವುದನ್ನು ಕಾಣಬಹುದು. ಅಂಥ ಎಲ್ಲ ಸ್ಮಾರಕ ಶಿಲ್ಪಗಳ ಕುರಿತು ವ್ಯಾಪಕ ಅಧ್ಯಯನ ಕೈಕೊಳ್ಳುವುದು ಅಗತ್ಯವಿದೆ ಎಂದರು.
ಹಾಲುಮತ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ.ಎಫ್.ಟಿ.ಹಳ್ಳಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುರುಬರ ಇತಿಹಾಸ ಮತ್ತು ಸಂಸ್ಕೃತಿಯನ್ನು ಕಾವ್ಯ-ಪುರಾಣಗಳು, ಶಾಸನಾದಿ ದಾಖಲೆಗಳು ಹಾಗೂ ಮೌಖಿಕ ಆಕರಗಳ ಮೂಲಕ ಅಧ್ಯಯನ ಮಾಡಲಾಗುತ್ತಿತ್ತು. ಸ್ಮಾರಕ ಶಿಲ್ಪಗಳು ಸಹ ಇಂಥ ಸಮುದಾಯಗಳ ಕುರಿತು ಅಧ್ಯಯನ ಕೈಕೊಳ್ಳಲು ಆಕರಗಳಾಗುತ್ತವೆ. ಅಂಥ ಉಪೇಕ್ಷಿತ ಅಧ್ಯಯನಗಳತ್ತ ಯುವ ಸಂಶೋಧಕರು ಮನಸ್ಸು ಮಾಡಬೇಕು ಎಂದರು.