ಹೊಸಪೇಟೆ: ಜನಪದ ಹಾಡು, ಕಥೆ, ಒಗಟು, ಒಡುಪು, ಗಾದೆಗಳು, ಗ್ರಾಮೀಣ ಮಹಿಳೆಯರ ಜೀವನಾನುಭಾವದ ಅಭಿವ್ಯಕ್ತಿಯ ಘನತೆಯನ್ನು ಎತ್ತರಿಸಿದ ಪ್ರಕಾರಗಳಾಗಿವೆ ಎಂದು ಕನ್ನಡ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಾಸ್ಥ ಡಾ.ವೀರೇಶ ಬಡಿಗೇರ ಹೇಳಿದರು.
ಕನ್ನಡ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಶುಕ್ರವಾರ ನಡೆದ ಜನಪದ ಸಾಹಿತ್ಯ ಸಂಸ್ಕೃತಿ ಹಾಗೂ ಗಾಯನ ಪ್ರಾತ್ಯಕ್ಷಿಕೆ ಉಪನ್ಯಾಸದಲ್ಲಿ ಮಾತನಾಡಿದರು. ಗ್ರಾಮೀಣ ಮಹಿಳೆಯರು ಬದುಕಿನ ಹಲವು ಸಂಕೀರ್ಣತೆಯನ್ನು ಎದುರಿಸುತ್ತಾರೆ. ಹಾಡುವ ಮತ್ತು ಆಡುವ ಸ್ವಾತಂತ್ರöವನ್ನು ಸಂದರ್ಭದ ಅಗತ್ಯಕ್ಕೆ ತಾನೇ ಸೃಷ್ಟಿಸಿಕೊಳ್ಳುವ ಮೂಲಕ ಬದುಕಿನ ಒತ್ತಡಗಳನ್ನು ನಿಭಾಯಿಸಲು ಕಲಿತಿದ್ದಾಳೆ. ತನ್ನ ಧ್ವನಿಗೆ ತಾನೇ ಒಂದು ಸಾಮಾಜಿಕ ಗೌರವವನ್ನು ಸ್ಥಾಪಿಸಿಕೊಂಡಿದ್ದಾಳೆ. ಪುರುಷನಿಷ್ಟ ಅಹಂಕಾರಗಳಲ್ಲಿ ಕಳೆದು ಹೋಗ ಬಹುದಾಗಿದ್ದ ತನ್ನಂತ ಹಲವು ಮಹಿಳೆಯರ ಅಂತರAಗದ ಧ್ವನಿಗೆ ಸತ್ವಯುತ ಶಕ್ತಿ ತುಂಬಿದವಳಾಗಿದ್ದಾಳೆ ಎಂದರು.
ಗದುಗಿನ ಹುಲಕೋಟೆ ಪ್ರಾಧ್ಯಾಪಕ ಡಾ.ಅರ್ಜುನ ಗೊಳಸಂಗಿ ಮಾತನಾಡಿ, ಜನಪದ ಸಾಹಿತ್ಯ ಕ್ರಿಯಾಮೂಲವಾದದ್ದು. ಕ್ರಿಯೆ ಇಲ್ಲದಿದ್ದರೆ ಅದಕ್ಕೆ ಜಾಗವಿಲ್ಲ. ಜನಪದ ಹಾಡು, ಕತೆ, ಗಾದೆ, ಒಡಪು, ಹಂತಿಪದ, ಇವೆಲ್ಲವೂ ಕ್ರಿಯಾಶೀಲ ಸಮಾಜದ ಜೀವಂತ ಅಭಿವ್ಯಕ್ತಿಗಳು. ಪ್ರಸ್ತುತ ಜನಪ್ರಿಯ ಹಾಡುಗಳು ಅತಿಯಾಗಿ ಹುಟ್ಟುತ್ತಿವೆ. ಜನಪದರ ಮಾತು ಬಹಳ ಅರ್ಥಪೂರ್ಣವಾದದ್ದು. ತುತ್ತು ನಮ್ಮ ದೇಹ ಕ್ರಿಯೆಗಳಿಗೆ ಸತ್ವವನ್ನು ಒದಗಿಸಿದಂತೆ ಆಪತ್ತನ್ನು ಒದಗಿಸುತ್ತದೆ. ಸಮತೋಲನ ಆಹಾರ ದೇಹಾರೋಗ್ಯಕ್ಕೆ ಕಾರಣವಾದಂತೆ ಆರೋಗ್ಯಯುತ ಸಮಾಜಕ್ಕೂ ಕಾಣುತ್ತದೆ. ಸುಸಂಸ್ಕೃತ ನಡೆ, ನುಡಿಗಳು ಬದುಕಿನ ಸೂತ್ರಗಳಾಗಬೇಕು. ವಿಕೃತಿಯೇ ಎಲ್ಲ ಕಡೆ ರಾರಾಜಿಸುತ್ತಿದೆ. ಇಂತಹ ಹೊತ್ತಲ್ಲಿ ವಿದ್ಯಾರ್ಥಿಗಳಾದ ನೀವು ಜನಪದ ಸಂಸ್ಕೃತಿ ಸಂಭ್ರಮಗಳನ್ನು ಮೈಗೂಡಿಸಿಕೊಂಡ ಸೃಜನಶೀಲ ಹಾಗೂ ಪ್ರಜ್ಞಾವಂತ ನಾಗರಿಕರಾಗಬೇಕು, ಬಿರುಕಿಲ್ಲದ ಬಾಳು ಬದುಕಬೇಕು ಎಂದರು.