ಹೊಸಪೇಟೆ: ದೇಶಿ ವೈದ್ಯಕೀಯ ಪದ್ಧತಿ ಭಾರತದ ಶ್ರೇಷ್ಠ ಪರಂಪರೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವ್ಯಾಪಕವಾಗಿ ಪ್ರಯತ್ನಗಳು ನಡೆಯಬೇಕು ಎಂದು ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.
ಕನ್ನಡ ವಿವಿಯ ಮಾನವಶಾಸ್ತç ವಿಭಾಗದಲ್ಲಿ ಸೋಮವಾರ ಪಾಕ್ಷಿಕ ಮಾತು ನಾಟಿ ವೈದ್ಯ ಪದ್ಧತಿ ಪಾಕ್ಷಿಕ ಮಾತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಸಿ ವೈದ್ಯ ಪದ್ಧತಿಯು ಆರೋಗ್ಯಕರವಾಗಿದ್ದು, ಮೂಲ ಪ್ರಕೃತಿಗೆ ಅನುಗುಣವಾಗಿದೆ. ಆಲೋಪತಿ ಮಾತ್ರವಲ್ಲ ದೇಶಿ ವೈದ್ಯ ಪದ್ಧತಿಯೂ ಪರಿಣಾಮಕಾಯಾಗಿದ್ದು, ಇದು ರೋಗ ನಿವಾರಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ನಾಟಿ ವೈದ್ಯ ಪದ್ಧತಿಯ ಬಗ್ಗೆ ಪುರಾಣ, ಇತಿಹಾಸಗಳಲ್ಲೂ ಕೇಳಿದ್ದೇವೆ. ಇದು ನಮ್ಮ ದೇಶದ ಅತ್ಯಂತ ಶ್ರೇಷ್ಠ ಪರಂಪರೆಯಾಗಿದ್ದು ಪ್ರಸ್ತುತ ನಶಿಸುತ್ತಿದೆ. ರೋಗಗಳು ಬಂದಾಗ ತಕ್ಷಣ ಗುಣಮುಖರಾಗಬೇಕು ಎಂಬ ಭಾವನೆಯಿಂದ ನಾಟಿ ವೈದ್ಯ ಪದ್ಧತಿ ಜನರಿಂದ ದೂರವಾಗುತ್ತಿದೆ. ಈ ಪದ್ಧತಿ ಬಗ್ಗೆ ಅಧ್ಯಯನ ಆಗಬೇಕು ಎಂದರು.
ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿಯ ಉಪನ್ಯಾಸಕ ಡಾ.ಲಿಂಗರಾಜು ನಿಡುವಣಿ ಮಾತನಾಡಿ, ಎಪ್ಪತ್ತು ಗಿರಿಗಿಂತ ಕಪ್ಪತ್ತಗುಡ್ಡ ಮೇಲು ಎಂಬ ಗಾದೆಯಂತೆ ನಮ್ಮ ದೇಶದಲ್ಲಿ ಹಲವಾರು ಕಡೆಗಳಲ್ಲಿ ಔಷಧೀಯ ಸಸ್ಯವರ್ಗಗಳು ಕಂಡುಬರುತ್ತವೆ. ಈ ಕಾಡಿನ ಮಧ್ಯೆ ನಾವು ನಡೆದುಕೊಂಡು ಹೋದರೆ ಸಾಕು ನಮ್ಮಲ್ಲಿರುವ ಹಲವಾರು ರೋಗಗಳು ಗುಣಮುಖವಾಗಿ, ಮೈ ಹಗುರವಾದಂತೆ ಭಾಸವಾಗುತ್ತದೆ. ಕನ್ನಡ ವಿವಿಯಲ್ಲೂ ಕೂಡ ಹಲವು ರೀತಿಯ ಔಷಧೀಯ ಸಸ್ಯಗಳು ಇವೆ. ಅವುಗಳನ್ನು ಬಳಸಿಕೊಳ್ಳಬೇಕು. ಹಾಗೆ ಅವುಗಳನ್ನು ಆರೈಕೆ ಮಾಡಿ ಸಂರಕ್ಷಿಸಬೇಕು ಎಂದರು.