ಜಿಲ್ಲೆ

ಸಾರಿಗೆ ಬಂದ್ ಮುಷ್ಕರ ಆ.05ಕ್ಕೆ

ಹೊಸಪೇಟೆ: 38 ತಿಂಗಳ ಹಿಂಬಾಕಿ ಪಾವತಿ, 2024ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯದ ನಾಳ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ ಆ.05ರ ಬೆಳಗ್ಗೆ 6ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಜಿ.ಶ್ರೀನಿವಾಸಲು ತಿಳಿಸಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2023ರ ಡಿಸೆಂಬರ್ 31ರಂದು ಇದ್ದ ಮೂಲ ವೇತನದಲ್ಲಿ ಶೇ.31ರಷ್ಟು ತುಟ್ಟಿ ಭತ್ಯೆ ವಿಲೀನಗೊಳಿಸಿ, 2024ರ ಜನವರಿ 01 ರಿಂದ ಅನ್ವಯವಾಗುವಂತೆ ಶೇ.25ರಷ್ಟು ವೇತನ ಹೆಚ್ಚಿಸಬೇಕು ಆಗ್ರಹಿಸಿದರು.

ಏಪ್ರಿಲ್ 15ರಂದು ಕರೆದಿದ್ದ ಸಭೆಯಲ್ಲಿ ನಮ್ಮ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ, ಜುಲೈ 4ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರಿಗೆ ನಿಗಮಗಳ ನೌಕರರಿಗೆ 38 ತಿಂಗಳ ಹಿಂಬಾಕಿ ಕೊಡಬೇಕಾಗಿಲ್ಲ. 2027ರವರೆಗೆ ವೇತನ ಪರಿಷ್ಕರಣೆ ಮಾಡುವುದಿಲ್ಲ ಎಂದು ತೀರ್ಮಾನ ಮಾಡಿದ್ದಾರೆ. ಹೀಗಾಗಿ ಮುಷ್ಕರದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಪ್ರಮುಖರಾದ ವಿ.ಕೆ.ಹಿರೆಮಠ, ಪಿ.ರಾಜಶೇಖರ, ನಿರ್ಮಲ್ ಕುಮಾರ್, ಅಬ್ದುಲ್ ರಹೆಮಾನ್ ಸಾಬ್, ಮಾಹಿದ್ ಬಾಷಾ, ಹೋಳಿ ಬಸಪ್ಪ, ಯು.ಸೋಮಶೇಖರ್, ಶೇಖರಪ್ಪ ಗುಲಾತಿ, ಎಚ್.ಬಸವನ ಗೌಡ ಇತರರಿದ್ದರು.