ಹೊಸಪೇಟೆ: ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ನಗರದಲ್ಲಿ ಶುಕ್ರವಾರ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಬಿಇಒ ಎಂ.ಚನ್ನಬಸಪ್ಪ ಉದ್ಘಾಟಿಸಿ ಮಾತನಾಡಿ, ವರ್ಷವೀಡಿ ಬೋಧನಾ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಗಳು ಮಾನಸಿಕವಾಗಿ ಚೇತೋಹಾರಿಯಾಗಲು ಸಹಕಾರಿಯಾಗಿವೆ. ಶಿಕ್ಷಕರಲ್ಲಿ ಅಡಗಿರುವ ಅಗಾಧವಾದ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರೇರಕವಾಗಿವೆ ಎಂದರು.
ಸಹಪಠ್ಯ ಚಟುವಟಿಕೆಗಳಾದ ಪ್ರಬಂಧ, ಸಾಮಾನ್ಯ ಜ್ಞಾನ ಮತ್ತು ವಿಜ್ಞಾನ ರಸಪ್ರಶ್ನೆ, ಆಶು ಭಷಣ, ಭಾವಗೀತೆ, ಸ್ಥಳದಲ್ಲಿಯೇ ಚಿತ್ರ ಬರಯುವುದು ಮತ್ತು ಪಾಠೋಪಕರಣಗಳ ತಯಾರಿಕೆಯ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನಗಳನ್ನು ವಿತರಿಸಲಾಯಿತು.
ಶಿಕ್ಷಣ ಸಂಯೋಜಕರಾದ ಎಚ್.ಶಿವರಾಮಪ್ಪ, ಎಂ.ರಾಜು, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶೇಖರಪ್ಪ ಗಿರಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಾಧ್ಯಕ್ಷ ಕೆ.ಬಸವರಾಜ, ಸಿಆರ್‌ಪಿಗಳಾದ ಎನ್.ನಾಗರಾಜ, ಕಡಬಗೆರೆ ಪ್ರಕಾಶ್, ಶಿಕ್ಷಕರಾದ ಎಂ.ಮಲ್ಲಿಕಾರ್ಜುನ ಶೆಟ್ಟಿ, ಅನ್ವರ್ ಅಲಿ, ಎಲ್.ಹಾಲ್ಯಾನಾಯ್ಕ, ವಿಜಯಕುಮಾರ್, ಎಂ.ರಾಜು ಇತರರಿದ್ದರು.