ಹೊಸಪೇಟೆ: ತುಂಗಭದ್ರಾ ಜಲಾಶಯದ ಒಳ ಹರಿವು ತಗ್ಗಿರುವ ಹಿನ್ನೆಲೆಯಲ್ಲಿ ಬುಧವಾರ 8 ಗೇಟ್‌ಗಳಿಂದ 38 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದ್ದ, ಹಂಪಿಯಲ್ಲಿ ಮುಳುಗಿದ್ದ ಕೆಲ ಸ್ಮಾರಕಗಳು ಮತ್ತೆ ಕಾಣಿಸತೊಡಗಿವೆ.
ಬುಧವಾರ ಬೆಳಗ್ಗೆ 8ಕ್ಕೆ 90 ಸಾವಿರ ಕ್ಯೂಸೆಕ್ ಇದ್ದ ಒಳಹವಿರುವು ಮಧ್ಯಾಹ್ನ ಒಂದಕ್ಕೆ 56 ಸಾವಿರಕ್ಕೆ ಇಳಿದಿತ್ತು. ಇದರಿಂದ 5 ಗೇಟ್ 5 ಅಡಿ ಎತ್ತರಿಸಿ ನದಿಗೆ 38 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ಜಲಾಶಯಕ್ಕೆ ಭಾರಿ ಒಳಹರಿವು ಬಂದ ಹಿನ್ನೆಲೆಯಲ್ಲಿ ನದಿಗೆ ಅಷ್ಟೇ ಪ್ರಮಾಣದಲ್ಲಿ ನದಿಗೆ ನಿರು ಹರಿಸಲಾಯಿತು. ಹಂಪಿಯ ಪುರಂದರದಾಸರ ಮಂಟಪ, ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಸ್ನಾನಘಟ್ಟ, ವಿಷ್ಣು ಮಂಟಪ, ತುಂಗಾರತಿ ಸ್ಥಳ, ಕಾಲು ಸೇತುವೆ, ಜನಿವಾರ ಮಂಟಪಗಳು ಸೇರಿದಂತೆ ಸಂಪೂರ್ಣ ಮುಳುಗಡೆಯಾಗಿದ್ದವು. ಜಲಾಶಯದಿಂದ ಹೊರಹರಿವು ತಗ್ಗಿದರಿಂದ ಮುಳುಗಿದ ಸ್ಮಾರಕಗಳು ಕಾಣಸಿಗುತ್ತಿವೆ. ಕೋದಂಡರಾಮಸ್ವಾಮಿ ದೇವಾಲಯದ ಬಳಿಯೂ ನೀರು ಕಡಿಮೆ ಆಗಿದೆ. ಒಂದು ವೇಳೆ ಜಲಾಶಯಕ್ಕೆ ಒಳಹರಿವು ಹೆಚ್ಚಾದರೆ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುವುದು ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.