ಹೊಸಪೇಟೆ: ತುಂಗಭದ್ರಾ ಜಲಾಶಯದ ಒಳಹರಿವು ತಗ್ಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮೂರು ಕ್ರಸ್ಟ್ಗೇಟ್‌ಗಳಿಂದ 11 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದ್ದು, ಹಂಪಿಯಲ್ಲಿ ಮುಳುಗಿದ್ದ ಕೆಲ ಸ್ಮಾರಕಗಳು ಮತ್ತೆ ಕಾಣಿಸತೊಡಗಿವೆ.
ಗುರುವಾರ ಬೆಳಗ್ಗೆ 8ಕ್ಕೆ 98 ಸಾವಿರ ಕ್ಯೂಸೆಕ್ ಒಳಹರಿವಿತ್ತು. 94 ಸಾವಿರ ನದಿಗೆ ಹರಿಸಲಾಗಿತ್ತು. ಸಂಜೆ 4ಕ್ಕೆ ಜಲಾಶಯದ ಒಳಹರಿವು 53 ಸಾವಿರ ಕ್ಯೂಸೆಕ್‌ಗೆ ಬಂದಿರುವ ಹಿನ್ನೆಲೆಯಲ್ಲಿ ಮೂರು ಗೇಟ್ ಮೂರು 6 ಸಾವಿರ ಕ್ಯೂಸೆಕ್ ಹಾಗೂ ಕಾಲೂವೆ ಮೂಲಕ 5 ಸಾವಿರ ಕ್ಯೂಸೆಕ್ ನದಿಗೆ ಹರಿಸಲಾಗಿದೆ. ನದಿ ಹಾಗೂ ಕಾಲೂವೆ ಸೇರಿ ಒಟ್ಟು 21 ಸಾವಿರ ಕ್ಯೂಸೆಕ್ ನೀರು ಹೊರಗಡೆ ಬಿಡಲಾಗಿದೆ.
ಕಳೆದ ಕೆಲ ದಿನಗಳಿಂದ ಜಲಾಶಯಕ್ಕೆ ಭಾರಿ ಒಳಹರಿವು ಹಾಗೂ ಹಂಪಿಯ ಪುರಂದರದಾಸರ ಮಂಟಪ, ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಸ್ನಾನಘಟ್ಟ, ವಿಷ್ಣು ಮಂಟಪ, ತುಂಗಾರತಿ ಸ್ಥಳ, ಕಾಲು ಸೇತುವೆ, ಜನಿವಾರ ಮಂಟಪಗಳು ಸೇರಿದಂತೆ ಸಂಪೂರ್ಣ ಮುಳುಗಡೆಯಾಗಿದ್ದವು. ಜಲಾಶಯದಿಂದ ಹೊರಹರಿವು ತಗ್ಗಿದರಿಂದ ಮುಳುಗಿದ ಸ್ಮಾರಕಗಳು ಕಾಣಸಿಗುತ್ತಿವೆ. ಕೋದಂಡರಾಮ ದೇಗುಲ ಬಳಿಯೂ ನೀರು ಕಡಿಮೆ ಆಗಿದೆ. ಒಂದು ವೇಳೆ ಜಲಾಶಯಕ್ಕೆ ಒಳಹರಿವು ಹೆಚ್ಚಾದರೆ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುವುದು ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.