ಹೊಸಪೇಟೆ: ಇಲ್ಲಿ ಕಿಷ್ಕಿಂದ, ವಿಜಯನಗರ ಸಾಮ್ರಾಜ್ಯದ ಅರಸುರು ಆಳಿದ ನಾಡು, ಒನಕೆ ಓಬವ್ವಳ ತವರೂರು ನೆಲದ ಜನರು ಸ್ವಾಭಿಮಾನಿ, ಸ್ವಾವಲಂಬಿಗಳಾಗಿ ಜೀವನ ನಡೆಸಿದರೆ ಮಾತ್ರ ಭವಿಷ್ಯದ ಜೀವನ ಸುಗಮ ಆಗಲಿದೆ. ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೂಡ್ಲಿಗಿ ತಾಲೂಕಿನ ಕಸಾಪುರದಲ್ಲಿ 4.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ದೇಶದ ಮೊದಲ ಹುಣಸೆ ಮತ್ತು ಶೇಂಗಾ ಸಂಸ್ಕರಣ ಘಟಕವನ್ನು ಉದ್ಘಾಟಿಸಿ ಕನ್ನಡದಲ್ಲೇ ಮಾತನಾಡಿದರು. ಹಕ್ಕಬುಕ್ಕರು ಕಟ್ಟಿದ ವಿಜಯನಗರದ ನಾಡಲ್ಲಿ ಕೃಷಿ ಸಂಬಂಧಿತ ಸಂಸ್ಕರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇಲ್ಲಿ ಬಂದಿರುವುದು ಹೆಮ್ಮೆ ಅನಿಸುತ್ತಿದೆ. ನಾನು ಕನ್ನಡ ಮಾತನಾಡಲು ವಿಕ್ ಇದಿನಿ. ಈ ಭಾಗದಲ್ಲಿ ಅನುಕೂಲ ಆಗುವ ತೆಲುಗಿನಲ್ಲಿ ಮಾತನಾಡುವೆ ಎಂದರು.
ಈ ಭಾಗದಲ್ಲಿ ಮಳೆ ಕೊರತೆಯಿಂದ ಹಿನ್ನಲೆಯಲ್ಲಿ ಅಂದೆ ವಿಜಯನಗರ ಅರಸರ ಕಾಲದಲ್ಲೇ ಬಹುಸಂಖ್ಯೆಯಲ್ಲಿ ಹುಣಸೆ ಗಿಡಗಳನ್ನು ಬೆಳೆಸಲಾಗಿದೆ. ಈಗ ಈ ಗಿಡಗಳು ರೈತರಿಗೆ ಆಶ್ರಯವಾಗಿದೆ. ಬೀದರ್ ನಲ್ಲಿ ಸೋಯಾ, ಕಲಬುರಗಿಯಲ್ಲಿ ಜೋಳ, ಯಾದಗಿರಿಯಲ್ಲಿ ತೊಗರಿ, ಬಳ್ಳಾರಿಯಲ್ಲಿ ಮೆಣಸಿನಕಾಯಿ, ಕೊಪ್ಪಳದಲ್ಲಿ ಮಾವಿನಕಾಯಿ ಹಾಗೂ ವಿಜಯನಗರದಲ್ಲಿ ಹುಣಸೆ ಹಾಗೂ ಶೇಂಗಾ ಹೆಚ್ಚು ಬೆಳೆಯಲಾಗುತ್ತಿದ್ದು ಈ ನೆಲದ ಆಹಾರ ಸಂರಕ್ಷಣೆಗಾಗಿ ನಬಾರ್ಡ್ ನಿಂದ ಸಂಸ್ಕರಣ ಘಟಕಗಳನ್ನು ಆರಂಭ ಮಾಡಲಾಗಿದೆ. ರಾಜ್ಯದ 31ನೇ ಜಿಲ್ಲೆಯಾಗಿರುವ ವಿಜಯನಗರ, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು. ಇಲ್ಲಿಂದಲೇ ಅಭಿವೃದ್ಧಿಯ ಸಂಕಲ್ಪ ಮಾಡೋಣ ಎಂದರು.
ವಿಜಯನಗರದಲ್ಲಿ 95 ಸಾವಿರ ಮೆಟ್ರಿಕ್ ಟನ್ ಹುಣಸೆ ಉತ್ಪಾದನೆ ಆಗುತ್ತಿದೆ. 400 ಮೆಟ್ರಿಕ್ ಟನ್ ಸಾಮರ್ಥ್ಯದ ಸಂಸ್ಕರಣ ಘಟಕ ಇದಾಗಿದೆ. ಇನ್ನು 15 ಹುಣಸೆ ಘಟಕಗಳು ಆಗಬೇಕಿದೆ. ಇದರಿಂದ ಮಹಿಳೆಯರಿಗೆ ಉದ್ಯೋಗ ನೀಡಿದರೆ ಭವಿಷ್ಯ ಬದಲಾಗಲಿದೆ. ಈ ಭಾಗದಲ್ಲಿ ಇನ್ನೂ ಒಂದು ಲಕ್ಷಕ್ಕೂ ಅಧಿಕ ಹುಣಸೆ ಗಿಡಗಳನ್ನು ಸಿಎಸ್ ಆರ್ ಅನುದಾನದಲ್ಲಿ ಬೆಳೆಸಬೇಕಿದೆ. ಇಲ್ಲಿನ ಉತ್ಪನ್ನಗಳು ಬೆಂಗಳೂರು ಮಾತ್ರವಲ್ಲ ವಿದೇಶಗಳಿಗೂ ರಫ್ತಾಗಲಿದೆ ಎಂದರು.
ಮಳೆ ಬೆಳೆಯಿಲ್ಲದೇ ಕುಡಿವ ನೀರಿಗೂ ಪರದಾಡುವ ಪರಿಸ್ಥಿತಿ. ವಿಜಯನಗರ ದಾಟಿ ಬಂದರೆ ಬೀದರ್ ವರೆಗೆ ನೂರೆಂಟು ಸಮಸ್ಯೆಗಳಿವೆ. ಪಕ್ಷಾತೀತವಾಗಿ ಅಭಿವೃದ್ಧಿ ಮಾಡಬೇಕು. ವಿಜಯನಗರ ಸಂಪತ್ತ್ಭರಿತವಾಗಿದೆ. ಶಾಲಾ, ಕಾಲೇಜು, ಗ್ರಂಥಾಲಯ, ಜೀವನೋಪಾಯ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ಆಗಬೇಕಿದೆ. ಇದಕ್ಕೆ ಕೇಂದ್ರದ ಸಹಕಾರ ಇರಲಿದೆ ಎಂದರು.
ಧೀರ ಮಹಿಳೆ ಒಣಕೆ ಓಬವ್ವ ಅವರ ಸ್ಪೂರ್ತಿಯಲ್ಲಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು. ಬೇಟಿ ಬಚಾವೋ ಬೇಟಿ ಪಡಾವೋ, ಪೋಷಣಾ ಅಭಿಯಾನ ಸೇರಿದಂತೆ ಮಹಿಳೆಯರ ಅಭಿವೃದ್ಧಿಗೆ ಕೇಂದ್ರದ ಹಲವು ಯೋಜನೆಗಳಿದ್ದು ಸದುಪಯೋಗ ಪಡೆಯಬೇಕು. ಅನಿಷ್ಟ ಪದ್ದತಿಯಿಂದ ಹೊರ ಬರಲು ಜಾಗೃತಿ, ಯೋಜನೆಗಳನ್ನು ರೂಪಿಸಬೇಕಿದೆ ಎಂದರು.
ಈ ಭಾಗದಲ್ಲಿ ಶೇ.70ರಷ್ಟು ಪರಿಶಿಷ್ಟ ಪಂಗಡ ಸಮುದಾಯದವರಿದ್ದಾರೆ. ಈ ಸಮಾಜದ ಅಭಿವೃದ್ಧಿಗೆ ಏಕಲವ್ಯ ಶಾಲೆ ತೆರೆಯಲು ಸಹಕಾರ ನೀಡಲಾಗುತ್ತದೆ. ಇಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ವರ್ಷಕ್ಕೆ 21 ಸಾವಿರ ರೈತರಿಗೆ ತಲಾ 6 ಸಾವಿರ ರು. ಸಹಾಯಧನ ಸಿಗುತ್ತಿದೆ. 1.80 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಗಳಿವೆ. ಡಿಸೆಂಬರ್ ಒಳಗೆ ಜಿಲ್ಲಾಧಿಕಾರಿ ಕಚೇರಿ ಮೂಲಕ ಉಳಿದವರಿಗೂ ಕ್ರೆಡಿಟ್ ಕಾರ್ಡ್ ಸಿಗಬೇಕಿದೆ. ಯಾರೊಬ್ಬರು ಕೂಡ ಈ ಸೌಲಭ್ಯದಿಂದ ವಂಚಿತರಾಗಬಾರದು ಎಂದರು.
ಶಾಸಕಿ ಲತಾ ಮಲ್ಲಿಕಾರ್ಜುನ, ನಬಾರ್ಡ್ ಅಧಿಕಾರಿ ಸ್ಯಾಚಿ, ಐಎಎಸ್ ಅಧಿಕಾರಿಗಳಾದ ಉಮಾ ಮಹಾದೇವನ್, ಅನಿರುದ್ಧ ಶ್ರವಣ್, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಎಸ್ಪಿ ಎಸ್.ಜಾಹ್ನವಿ ಇತರರಿದ್ದರು.
ಬಳ್ಳಾರಿ ಭಾಗದಲ್ಲಿ 2 ಲಕ್ಷ ಮೆಟ್ರಿಕ್ ಟನ್ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಈ ಪ್ರದೇಶದಲ್ಲಿ ಮೆಣಸಿನಕಾಯಿ ಸಂಸ್ಕರಣ ಘಟಕ ಸ್ಥಾಪನೆ ಆಗಬೇಕು. ಜೊತೆಗೆ ಉತ್ತಮ ಮಾರುಕಟ್ಟೆ ದೊರೆಯಬೇಕು. ಈ ಭಾಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೈಜೋಡಿಸಲಿ.
- ಈ. ತುಕಾರಾಂ, ಸಂಸದ, ಬಳ್ಳಾರಿ
ಈ ಪ್ರದೇಶ ದೇಶದಲ್ಲೇ ಅತಿ ಮಳೆ ಬೀಳುವ ಪ್ರದೇಶ ಆಗಿದೆ. ನೀರಾವರಿಯಲ್ಲಿ ತೀರಾ ಹಿಂದುಳಿದಿದ್ದೇವೆ. ಈ ಭಾಗದಲ್ಲಿ ದೇವದಾಸಿ ಪದ್ಧತಿಯೂ ಇದೆ. ಬಾಲ್ಯವಿವಾಹ ಪ್ರಕರಣಗಳು ಜಾಸ್ತಿ ಇವೆ. ಪೋಕ್ಸೋ ಪ್ರಕರಣಗಳು ಜಾಸ್ತಿ ಇದೆ. ಜಾಧಿಕಾರಿಗಳಾದೊ ದೌರ್ಜನ್ಯ ಪ್ರಕರಣಗಳು ಈ ಭಾಗದಲ್ಲಿ ಜಾಸ್ತಿ ಇದೆ. ಈ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿ ಮಾಡಬೇಕು.
- ಡಾ. ಎನ್.ಟಿ. ಶ್ರೀನಿವಾಸ್, ಕೂಡ್ಲಿಗಿ ಶಾಸಕ