ಹೊಸಪೇಟೆ: ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಶೋಷಿತರಿಗೆ ನ್ಯಾಯ ಕೊಡಿಸುವ ಪ್ರಯತ್ನವಾಗಿದೆ ಎಂದು ಅಹಿಂದ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮೀಸಲಾತಿಗಾಗಿ ಶತಮಾನಗಳಿಂದ ಹೋರಾಟ ಮಾಡಿದರು, ನ್ಯಾಯಬದ್ಧ ಮೀಸಲಾತಿ ಪಡೆಯುವಲ್ಲಿ ವಿಫಲವಾಗಿದ್ದೇವೆ. ರಾಜ್ಯ ಸರ್ಕಾರ ನೂರಾರು ಕೋಟಿ ರೂ. ಖರ್ಚು ಮಾಡಿ ನಡೆಸುವ ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಭಾಗವಹಿವುದು ಅನಿವಾರ್ಯವಾಗಿದೆ. ಇದರಿಂದ ಕೆಲವರ ಬಣ್ಣ ಬಯಲಾಗಲಿದೆ ಎಂಬ ಆತಂಕದಿAದ ಸಮೀಕ್ಷೆಯ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಆದ್ದರಿಂದ ಸಮೀಕ್ಷೆಗೆ ಅ.07 ಕೊನೆಯ ದಿನವಾಗಿದ್ದು, ರಾಜ್ಯ ಸರ್ಕಾರ ಇನ್ನೂ ಒಂದು ವಾರ ಹೆಚ್ಚವರಿ ಕಾಲಾವಕಾಶ ನೀಡಬೇಕು. ಮೀಸಲಾತಿಯಿಂದ ವಂಚನೆಗೊಳಗಾಗಿರುವ ಸಮುದಾಯಗಳಿಗೆ ಈ ಜಾತಿ ಸಮೀಕ್ಷೆ ವರದಾನವಾಗಲಿದೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ತಪ್ಪದೇ ಈ ಜಾತಿ ಸಮೀಕ್ಷೆಯಲ್ಲಿ ತಮ್ಮ ಜಾತಿಯ ಹೆಸರನ್ನು ಮತ್ತು ಕುಲ ಕಸುಬನ್ನು ನಮೂದಿಸಬೇಕು. ಯಾವುದೇ ಕಾರಣಕ್ಕೂ ಸಮೀಕ್ಷೆಯಿಂದ ದೂರ ಉಳಿಯಬಾರದು ಎಂದು ತಿಳಿಸಿದರು.
ಅಹಿಂದ ವೇದಿಕೆಯ ಅಧ್ಯಕ್ಷ ಬುಡ್ಡಿ ಬಸವರಾಜ್, ಪ್ರಮುಖರಾದ ರವಿಕುಮಾರ್, ಸದ್ದಾಮ್ ಹುಸೇನ್, ಜೆ.ಶಿವಕುಮಾರ್, ಜೆ.ಸಿ.ಈರಣ್ಣ, ಸಣ್ಣವೀರಪ್ಪ ಇತರರಿದ್ದರು.