ಜಿಲ್ಲೆ

ರಣಬಿಸಿಲಿಗೆ ಜನ ಹೈರಾಣ

ಮಂಜುನಾಥ

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ವಿಜಯನಗರ ಜಿಲ್ಲೆಯಲ್ಲಿ ಕಳೆದ ಫೆಬ್ರುವರಿ ತಿಂಗಳ ಮಧ್ಯದಿಂದಲೇ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಮಹಾ ಶಿವರಾತ್ರಿ ಮುಗಿಯುತ್ತಿದ್ದಂತೆ ತಡಮಾಡದೆ ಬಿಸಿಲಿನ ಪ್ರತಾಪ ಹೆಚ್ಚುತ್ತಾ ಸಾಗಿದೆ. ದಿನ ಕಳೆದಂತೆ ಜಿಲ್ಲೆಯ ಜನರಿಗೆ ರಣಬಿಸಿಲಿನ ಅನುಭವ ಆಗುತ್ತಿದೆ.

ಬೆಳಿಗ್ಗೆ ಸೂರ್ಯೋದಯವಾಗುತ್ತಲೇ ಬಿಸಿಲಿನ ಹೊಡೆತ ಆರಂಭವಾಗುತ್ತಿದ್ದು, ಸೂರ್ಯಾಸ್ತದವರೆಗೂ ಬಿಸಿಲಿನ ಝಳ ಇರಲಿದೆ. ಬಿಸಿಲಿನ ಹೊಡೆತಕ್ಕೆ ಜನರು ಹೊರಗಡೆ ಬರಲು ಹಿಂದೇಟು ಹಾಕುವಂತಾಗಿದೆ. ಬಿಸಿಲಿಗೆ ಜನ, ಜಾನುವಾರು ತತ್ತರಿಸುವಂತಾಗಿದೆ. ಇಷ್ಟು ದಿನ ಕಡಿಮೆ ಬಿಸಿಲಿನ ಅನುಭವದಲ್ಲಿದ್ದರಿಂದ ಇದೀಗ ಉಷ್ಣಾಂಶದಲ್ಲಿ ಒಂದು ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೂ ಭಾರೀ ಬಿಸಿಲಿನ ಅನುಭವ ಆಗುತ್ತಿದೆ. ಮಹಾ ಶಿವರಾತ್ರಿ ಬಳಿಕ ದಿನೇ ದಿನೇ ಬಿಸಿಲಿನ ಪ್ರತಾಪ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಗರಿಷ್ಠ 24 ರಿಂದ 40 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ದಾಖಲಾಗುತ್ತಿದೆ. ಯುಗಾದಿ ಹಬ್ಬದ ವೇಳೆಗೆ ಬಿಸಿಲಿನ ಹೊಡೆತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬೇಸಿಗೆಯ ಬಿಸಿಲ ಧಗೆಯೊಂದಿಗೆ ಬಿಸಿಗಾಳಿಯೂ ಅನುಭವ ಆಗುತ್ತಿರುವುದರಿಂದ ಬಾಯಾರಿಕೆಯೂ ಹೆಚ್ಚಿಗೆ ಆಗುತ್ತಿದೆ. ಆದ್ದರಿಂದ, ಬಿಸಿಲಿನ ಹೊಡೆತದಿಂದ ತಾತ್ಕಾಲಿಕ ಉಪಶಮನಕ್ಕಾಗಿ ಜನರು ತಂಪು ಪಾನೀಯಗಳು ಸೇವನೆ ಮಾಡಿ ದೇಹ ತಂಪಾಗಿಸಲು ಪ್ರಯತ್ನ ಮಾಡುತ್ತಿದ್ದಾರೆ.

ಬೇಸಿಗೆಯಲ್ಲಿ ದಿನ ಬೆಳಗಾಗುತ್ತಿದ್ದಂತೆ ಜಿಲ್ಲೆಯ ನಗರ ಮತ್ತು ಗ್ರಾಮೀಣ ಜನರು ಸೈಕಲ್, ಬೈಕ್ ಹಾಗೂ ತಳ್ಳುವ ಗಾಡಿಗಳಲ್ಲಿ ಖಾಲಿ ಕೊಡಗಳನ್ನಿಟ್ಟುಕೊಂಡು ಕೊಳವೆ ಬಾವಿ, ಹಳ್ಳ-ಕೊಳ್ಳಗಳಿಗೆ ಅಲೆದಾಡುವುದು ಸಾಮಾನ್ಯವಾಗಿತ್ತು. ಕೆಲ ಗ್ರಾಮಗಳು ನದಿ ಪಾತ್ರದಲ್ಲಿದ್ದರೂ ಬೊಗಸೆಯಲ್ಲಿ ನೀರು ತುಂಬಿಕೊಳ್ಳುವ ಅನಿರ್ವಾಯತೆ ಇತ್ತು. ಕಳೆದ ಬಾರಿ ಉತ್ತಮ ಮಳೆಯಿಂದ ಅಂತರ್ಜಲ ಕೂಡ ಚನ್ನಾಗಿದೆ. ಹರಪನಹಳ್ಳಿಯ 55 ಗ್ರಾಮಗಳಲ್ಲಿ ಸಮಸ್ಯೆ ಆಗಬಹುದು ಎಂದು ಗುರುತಿಸಲಾಗಿದೆ. ಇದನ್ನು ಹೊರತು ಪಡಿಸಿದರೆ, ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಆಗಲ್ಲ ಎಂದು ಅಧಿಕಾರಗಳ ಮಾತಾಗಿದೆ. ಇನ್ನು ಬೇಸಗೆ ಬಿಸಲಿನಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿಳಬಾರದು. ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ.

ಅಧಿಕಾರಿಗಳಿಗೆ ನಿರ್ದೇಶನ

ಬೇಸಿಗೆ ಹಿನ್ನೆಲೆಯಲ್ಲಿ ಕುಡಿವ ನೀರಿನ ಅಭಾವವಾಗದಂತೆ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವುದು. ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ನೀರು ಕಲುಷಿತಗೊಳ್ಳದಂತೆ ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಒಎಚ್‌ಟಿ, ಮಿನಿಟ್ಯಾಂಕ್, ಆರ್‌ಒ ಪ್ಲಾಂಟ್, ಜಿಎಸ್‌ಎಲ್‌ಆರ್, ದನಕರುಗಳ ಕುಡಿವ ನೀರಿನ ತೊಟ್ಟಿಗಳನ್ನು ಸ್ವಚ್ಚಗೊಳಿಸುವುದು. ಸದರಿ ಪ್ರಕ್ರಿಯೆಯನ್ನು ಜಿಪಿಎಸ್ ಫೋಟೋಗಳೊಂದಿಗೆ ವರದಿ ನೀಡಬೇಕು. ಕುಡಿವ ನೀರು ಸರಬರಾಜಾಗುವ ಎಲ್ಲಾ ಪೈಪ್‌ಲೈನ್‌ಗಳನ್ನು ಪರೀಕ್ಷಿಸಬೇಕು. ಕಲುಷಿತ ನೀರು ಬೆರೆಯದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಕಲುಷಿತ ನೀರು ಸೇರದಂತೆ ಮುನ್ನೆಚ್ಚರಿಕೆ ವಹಿಸಿ, ಪರೀಕ್ಷಿಸಬೇಕು. ಆರೋಗ್ಯ ಇಲಾಖೆಯಿಂದ ನೀರನ್ನು ಆಗಿಂದಾಗ್ಗೆ ಪರೀಕ್ಷೆ ನಡೆಸಬೇಕು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ತೊಂದರೆಯಾಗುತ್ತಿದ್ದಲ್ಲಿ ನಿಯಮಾನುಸಾರ ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆದು ಬೇಸಿಗೆಯಲ್ಲಿ ನೀರಿನ ಅಭಾವವಾಗದಂತೆ ಹಾಗೂ ಕಲುಷಿತ ನೀರು ಸರಬರಾಜಾಗದಂತೆ ಎಚ್ಚರವಹಿವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದ್ದಾರೆ.

ಪಾನೀಯಗಳಿಗೆ ಹೆಚ್ಚಾದ ಬೇಡಿಕೆ

ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಜನರು ತಂಪು ಪಾನೀಯ, ಎಳನೀರು, ನಿಂಬು ಶರಬತ್, ಹಣ್ಣುಗಳ ಸೇವನೆ ಸೇರಿ ಹಲವು ಉಪಾಯಗಳನ್ನು ಕಂಡುಕೊಳ್ಳುತ್ತಿರುವುದರಿAದ ಪಾನೀಯಗಳಿಗೆ ಬೇಡಿಕೆ ಬಂದಿದೆ. ಜನನಿಬಿಡ ಪ್ರದೇಶದಲ್ಲಿ ತಂಪು ಪಾನೀಯ ಮಾರಾಟಗಾರರು ಅಂಗಡಿಗಳನ್ನು ತೆರೆದಿದ್ದಾರೆ. ಬೆಳಿಗ್ಗೆಯಿಂದ ರಾತ್ರಿವರೆಗೂ ತಂಪು ಪಾನೀಯಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ. ನಗರದ ವಿವಿಧ ಕಡೆ ಕಲ್ಲಂಗಡಿ ಹಣ್ಣುಗಳನ್ನು ಗುಡ್ಡೆ ಹಾಕಿ ಮಾರಾಟ ಎಲ್ಲೆಡೆ ಕಂಡು ಬರುತ್ತಿದೆ.

ಜಿಲ್ಲೆಯಲ್ಲಿ ಹರಪನಹಳ್ಳಿಯ 55 ಹಳ್ಳಿಗಳಿಗೆ ನೀರಿನ ಅಭಾವ ಆಗಬಹುದು. ಉಳಿದ ಎಲ್ಲ ಕಡೆ ತುಂಗಭದ್ರಾ ಜಲಾಶಯದ ನೀರು ಪುರೈಕೆ ಆಗುತ್ತಿದೆ. ಬೇಸಿಗೆಯಲ್ಲಿ ಆರೋಗ್ಯದ ಮಸ್ಯೆ ಆಗದಂತ ಕ್ರಮ ವಹಿಸಲು ಸೂಚನೆ ನೀಡಲಾಗಿದೆ. - ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ