ಜಿಲ್ಲೆ

ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಜೂ.10 ರಿಂದ ಅನಿರ್ದಿಷ್ಟ ಧರಣಿ

ಮಂಜುನಾಥ

ಹೊಸಪೇಟೆ: ಇನ್ನು ಹದಿನೈದು ದಿನದೊಳಗೆ ನಗರ ವ್ಯಾಪ್ತಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸ್ಥಳ ಮತ್ತು ಭೂಮಿ ಪೂಜೆಗೆ ದಿನಾಂಕವನ್ನು ನಿಗಧಿ ಮಾಡದಿದ್ದಲ್ಲಿ ತಾಲೂಕು ಕಚೇರಿ ಮುಂದೆ ಜೂ.10 ರಿಂದ ಅನಿರ್ದಿಷ್ಟ ಧರಣಿ ಹಮ್ಮಿಕೊಳ್ಳಲಾಗವುದು ಎಂದು ಇಲ್ಲಿನ ರೈತರ ಸಂಘದ ಅಧ್ಯಕ್ಷ ಕಟಿಗಿ ಜಂಬಯ್ಯ ನಾಯಕ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ನಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದರು. ಸರ್ಕಾರಕ್ಕೆ ಎರಡು ವರ್ಷ ಕಳೆದಿದ್ದು, ಈ ವರೆಗೂ ಚಕಾರ ಎತ್ತದಿರುವುದು ಇಲ್ಲಿನ ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಮೇ 20ಕ್ಕೆ ಸಾಧನ ಸಮಾವೇಶದಲ್ಲಿ ಕಾರ್ಖಾನೆ ಸ್ಥಾಪನೆಗೆ ಹಸಿರು ನಿಶಾನೆ ದೊರೆಯಲಿದೆ ಎಂದು ನಮಗೆ ಅಸ್ವಶನೆ ನೀಡಿದ್ದರು. ಅಲ್ಲಿಯೂ ಪ್ರಸ್ತಾಪ ಮಾಡಲಿಲ್ಲ. ಸುಳ್ಳು ಹೇಳುತ್ತಾ ಸಚಿವರು, ಶಾಸಕರು ಮತ್ತು ಜಿಲ್ಲಾಡಳತ ಕಬ್ಬು ಬೆಳೆಗಾರರ ಮೂಗಿಗೆ ತುಪ್ಪು ಹಚ್ಚುವ ಕೆಲಸ ನಡೆದಿದೆ ಎಂದರು.

ಕಳೆದ ಎಂಟು ವರ್ಷಗಳಿಂದ ಸಕ್ಕರೆ ಕಾರ್ಖಾನೆ ಇಲ್ಲದೇ ಕಬ್ಬು ಬೆಳೆದ ರೈತರು ದೂರದ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ಪರುದಾಡು ಸ್ಥಿತಿ ಎದುರಾಗಿದೆ. ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಯಾರೂ ಮುಂದೆ ಬರದೇ ಹೋದಲ್ಲಿ ನಾನೇ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದ್ದರು. ಹದಿನೈದು ದಿನಗಳಲ್ಲಿ ಗೊಂದಲದ ಗುಡಾಗಿರುವ ಕಾರ್ಖಾನೆ ಸ್ಥಾಪನೆಗೆ ಸ್ಥಳಯಾವುದು ಎಂದು ನಿಗಧಿ ಮಾಡಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಭೂಮಿ ಪೂಜೆ ಮಾಡಲು ದಿನಾಂಕ ನಿಗಧಿ ಮಾಡದೇ ಹೋದರೆ ನಗರದ ತಾಲೂಕು ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ಮಾಡುವುದಾಗಿ ಹೇಳಿದರು.

ಪ್ರಮುಖರಾದ ಎಂ.ಜೆ. ಜೋಗಯ್ಯ, ಉತ್ತಾಂಗಿ ಕೊಟ್ರೇಶ್, ಕೆ.ವೆಂಕೋಬಣ್ಣ. ಬಿ.ನಾಗರಾಜ, ಸಿ.ಹಾಶಾಂ, ಜಿ.ಗಾದಿಲಿಂಗಪ್ಪ, ಸಿ.ಅಂಜಿನಪ್ಪ, ರಾಂಪುರದ ಯಲ್ಲಪ್ಪ, ಜಾಕೀರ್ ಹುಸೇನ್ ಇದ್ದರು.