ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಸ್ಮಾರಕಗಳ ಸ್ವರ್ಗ ಎಂದೆ ಖಾತಿಯ ವಿಜಯನಗರ ನೂತನ ಜಿಲ್ಲೆಯಾಗಿ ನಾಲ್ಕುವರ್ಷ ಕಳೆದು ಐದನೇ ವರ್ಷಕ್ಕೆ ಪಾದರ್ಪಣೆ ಮಾಡಿದೆ. ಆದರೆ, ಕಳೆದ ಬಾರಿ ಬಜೆಟ್ ಹಾಗೂ ಸಚಿವ ಸಂಪುಟದಲ್ಲಿ ಭರವಸೆ ಹುಸಿಯಾತ್ತು. ಈ ಬಾರಿಯಾದರೂ ವಿಶೇಷ ಅನುದಾನ ನೀಡಿ ಜಿಲ್ಲೆಯ ಹಣೆಬರಹ ಬದಲಾಯಿಸುತ್ತಾರ? ಎಂಬ ಪ್ರಶ್ನೆ ಜತೆ ಆಶಾಭಾವ ಮೂಡಿದೆ.
ಕಳೆದ ನಾಲ್ಕು ವರ್ಷಗಳಿಂದ ಹೇಳಿಕೊಳ್ಳವಂತೆ ಬಜೇಟ್‌ನಲ್ಲಿ ಅನುದಾನ ಬಂದಿಲ್ಲ. ಮೂರು ರಾಜ್ಯ ಜೀವನಾಡಿತುಂಗಭದ್ರಾ ಜಲಾಯದ ಗೇಟ್ ನಿರ್ಮಾಣ, ವೈದ್ಯಕೀಯ ಕಾಲೇಜು, ಸಕ್ಕರೆ ಕಾರ್ಖಾನೆ, ಪ್ರವಾಸೋದ್ಯಮ ಬೆಳವಣಿಗೆಗೆ ಹೇರಳ ಅವಕಾಶಗಳಿರುವ ವಿಶ್ವವಿಖ್ಯಾತ ಹಂಪಿ ಸೇರಿ ತಾಲೂಕುಗಳಲ್ಲಿ ಅಭಿವೃದ್ಧಿಗೆ ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಆದ್ಯತೆ ಸಿಗಲಿದೆ ಎಂಬ ನಿರೀಕ್ಷೆಗಳು ಜಿಲ್ಲೆಯ ಜನರಲ್ಲಿ ಗರಿಗೆದರಿವೆ.
ದಕ್ಷಿಣದ ಕಾಶಿ, ಐತಿಹಾಸಿಕ ಸ್ಮಾರಕಗಳ ನಗರಿ ಎನಿಸಿಕೊಂಡಿರುವ ಪ್ರವಾಸಿ ತಾಣ ಹಂಪಿಗೆ ದೇಶ, ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುವ ಐತಿಹಾಸಿಕ ಸ್ಥಳದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಗಬೇಕಿದೆ. ಆದರೆ, ಈವರೆಗೆ ಹಂಪಿಯ ಅಭಿವೃದ್ಧಿಯ ಮಾತುಗಳು ಕೇವಲ ವೇದಿಕೆಗಳಿಗೆ ಸೀಮಿತವಾಗಿವೆ. ಜಿಲ್ಲೆಯಲ್ಲಿ ನಾನಾ ಪ್ರವಾಸಿ ಸ್ಥಳಗಳಿದ್ದು, ಹಂಪಿ, ದರೋಜಿ ಕರಡಿಧಾಮ, ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕ್, ತುಂಗಭದ್ರಾ ಜಲಾಶಯ ಸೇರಿದಂತೆ ನಾನಾ ಪ್ರವಾಸಿ ಸ್ಥಳಗಳ ಅಭಿವೃದ್ಧಿಪಡಿಸುವ ಮೂಲಕ ಉದ್ಯೋಗ ಸೃಷ್ಟಿಸಬೇಕು. ವಿಜಯನಗರ ಸಾಮ್ರಾಜ್ಯ ಕಾಲದಿಂದಲೂ ಪುರಾತನವಾಗಿ ಈ ಭಾಗದಲ್ಲಿ ಸುಗಂಧಿ ಬಾಳೆ ಬೆಳೆಯಲಾಗುತ್ತಿತ್ತು. ಈ ಭಾಗದಲ್ಲಿ ಹೆಚ್ಚಾಗಿ ಬಾಳೆ ಬೆಳೆಯುವುದರಿಂದ ಬಾಳೆ ಸಂಶೋಧನಾ ಕೇಂದ್ರ ಸ್ಥಾಪನೆಯಾಗಬೇಕೆಂಬ ಕೂಗಿದೆ.
ಕಳೆದ ಸರ್ಕಾರದಲ್ಲಿ ಸಕ್ಕರೆ ಕಾರ್ಖಾನೆ ಅನುಮೋದನೆಯಾಗಿ ಭೂಮಿಪೂಜೆ ಕೂಡ ನೆರವೇರಿಸಲಾಗಿತ್ತು. ಆದರೆ, ಬದಲಾದ ರಾಜಕೀಯದಿಂದ ಸಕ್ಕರೆ ಕಾರ್ಖಾನೆ ಕಾರಣಾಂತರದಿAದ ಸ್ಥಗಿತಗೊಂಡಿದೆ. ಇದ್ದರಿಂದ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಬೆಳೆಗಾರರ ಬೆನ್ನಿಗೆ ಸರ್ಕಾರ ನಿಲ್ಲಬೇಕು ಎಂಬ ಕೂಗಿದೆ. ರೈತರಿಗೆ ಶೂನ್ಯ ಬಡ್ಡಿದರ ಸಾಲದ ಮೊತ್ತವನ್ನು 5 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಬೇಕು. ಶೇ.3ರ ಬಡ್ಡಿದರದಲ್ಲಿ ನೀಡುವ 10 ಲಕ್ಷ ರೂ. ಸಾಲದ ಮೊತ್ತವನ್ನು 20 ಲಕ್ಷಕ್ಕೆ ಹೆಚ್ಚಿಸಬೇಕು. 10 ಎಚ್‌ಪಿ ವರೆಗಿನ ಪಂಪ್‌ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಬೇಕು ಎಂಬ ಒತ್ತಾಯ ಕೂಡ ಇದೆ.
ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಹಬ್ ಸ್ಥಾಪಿಸಿ ಉದ್ಯೋಗ ಸೃಷ್ಟಿಗೆ ಮುಂದಾಗಬೇಕೆAಬ ಬಯಕೆ ಇಲ್ಲಿನ ಉದ್ಯಮಿಗಳಲ್ಲಿದೆ. ವಿಜಯಪುರ, ಹಾವೇರಿ, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ ಜಿಲ್ಲೆಗಳಿಗೆ ಮಧ್ಯ ಭಾಗದಲ್ಲಿರುವ ವಿಜಯನಗರ ಜಿಲ್ಲೆಯಲ್ಲಿ ಕೈಗಾರಿಕೆ ಪಾರ್ಕ್ ಸ್ಥಾಪಿಸಲು ರಾಜ್ಯ ಸರ್ಕಾರ ಆಸಕ್ತಿ ತೋರಿದರೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂಬ ನಿರೀಕ್ಷೆಯೂ ಇದೆ.
ಜಿಲ್ಲಾ ಕೇಂದ್ರವಾಗಿರುವ ಹೊಸಪೇಟೆಯಲ್ಲಿ 250 ಹಾಸಿಗೆ ಜಿಲ್ಲಾಸ್ಪತ್ರೆ ನಿರ್ಮಾಣ ಪ್ರಗತಿಯಲ್ಲಿದ್ದು, 400 ಹಾಸಿಗೆ ಮಾಡಲು ಪ್ರಸ್ಥಾವನೆಯಿದೆ. 50 ಹಾಸಿಗೆ ಮಕ್ಕಳ ತುರ್ತು ಚಿಕಿತ್ಸಾ ಘಟಕ ಟೆಂಡರ್ ಹಂತದಲ್ಲಿದೆ. ಉಪವಿಭಾಗೀಯ ಮಟ್ಟದ ಆಸ್ಪತ್ರೆಯನ್ನು 100 ಹಾಸಿಗೆಯಿಂದ 150 ಹಾಸಿಗೆಗೆ ಹೆಚ್ಚಿಸಲಾಗುತ್ತಿದೆ. ಈ ಭಾಗದಲ್ಲಿ ಉತ್ತಮ ಆಸ್ಪತ್ರೆಗಳ ಸೌಲಭ್ಯಗಳಿಲ್ಲದ ಕಾರಣ ನೆರೆ ಜಿಲ್ಲೆಗಳಿಗೆ ತೆರಳಬೇಕಿದೆ. ಹೀಗಾಗಿ ವಿಜಯನಗರ ಜಿಲ್ಲೆಗೆ ಪ್ರಸಕ್ತ ವರ್ಷದಲ್ಲಿಯೇ ವೈದ್ಯಕೀಯ ಕಾಲೇಜು ಘೋಷಣೆ ಈ ಬಜೆಟ್‌ನಲ್ಲಿ ಆಗಬೇಕು ಎಂಬ ಒತ್ತಾಯ ಇದೆ.
ಹಗರಿಬೊಮ್ಮನಹಳ್ಳಿ ತಾಲೂಕಿಗೆ ಕೃಷಿ ವಿಶ್ವವಿದ್ಯಾಲಯ ಆಗಬೇಕು ಎಂಬ ಕೂಗಿದೆ. ಗಾರ್ಮೆಂಟ್ ಫ್ಯಾಕ್ಟರಿಗಳು, ಸಣ್ಣ ಪುಟ್ಟ ಕೈಗಾರಿಕೆಗಳು ನಿರ್ಮಾಣವಾಗಿ ಉದ್ಯೋಗ ಸೃಷ್ಠಿ ಆಗಬೇಕಿದೆ. ಕೆರೆಗಳಿಗೆ ಶಾಶ್ವತ ನೀರು ತುಂಬಿಸುವ ಯೋಜನೆ ಸಿಗಲಿ. ಅತಿ ಹೆಚ್ಚು ಎಣ್ಣೆ ಕಾಳುಗಳು ಬೆಳೆಯುವ ತಾಲೂಕಾಗಿದ್ದು, ಸಂರಕ್ಷಣಾ ಕೇಂದ್ರ, ಕೋಲ್ಡ್ ಸ್ಟೋರೇಜ್ ಕೇಂದ್ರ ನಿರ್ಮಾಣವಾಗಲಿ ಎಂಬ ಬೇಡಿಕೆಯಿದೆ.
ಹೂವಿನ ಹಡಗಲಿ ತಾಲೂಕಿನ ಅಂಗೂರು ಗ್ರಾಮದ ಸಮೀಪ ತುಂಗಭದ್ರಾ ನದಿಯಿಂದ ರೈತರ ಜಮೀನುಗಳಿಗೆ ನೀರು ಹರಿಸಲು 13 ವರ್ಷಗಳ ಹಿಂದೆ ಆರಂಭವಾಗಿದ್ದ ಕುಡುಗೋಲುಮಟ್ಟಿ ಏತನೀರಾವರಿ ಯೋಜನೆ ಇನ್ನೂ ಪೂರ್ಣವಾಗಿಲ್ಲ. ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಸುಮಾರು 5 ಸಾವಿರಕ್ಕೂ ಹೆಚ್ವು ಪ್ರದೇಶಕ್ಕೆ ನೀರು ಹರಿಸುವ ಕಾಲುವೆಗಳ ನಿರ್ವಹಣೆಗೆ ಹಣ ಬಿಡುಗಡೆಯಾಗದೆ ಕೊನೆಭಾಗದ ರೈತರಿಗೆ ನೀರು ದೊರಕುತ್ತಿಲ್ಲ. ಮೈಲಾರ ಅಭಿವೃದ್ಧಿ ಪ್ರಾಧಿಕಾರ ಪ್ರಾಧಿಕಾರ ರಚನೆಯಾಗಿ ಅನುದಾನ ಬಿಡುಗಡೆ ಆಗಲಿದೆಯಾ? ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿದೆ.
ಹಿಂದುಳಿದ ತಾಲೂಕಾಗಿರುವ ಕೂಡ್ಲಿಗಿಯಲ್ಲಿ ಯಾವುದೇ ನೀರಾವರಿ ಯೋಜನೆಗಳಿಲ್ಲ. ತೀವ್ರವಾದ ಬರ ಹೊಂದಿದ್ದ ತಾಲೂಕಿನಲ್ಲಿ 2018 ರಲ್ಲಿ 74 ಕೆರೆಗಳಿಗೆ ಕೆರೆ ತುಂಬಿಸುವ ಯೋಜನೆಗಾಗಿ ಯೋಜನೆ ರೂಪಿಸಿ, ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ 800 ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಿಸಲಾಗಿತ್ತು. ಸುಮಾರು ಶೇ 95 ರಷ್ಟು ಕಾಮಗಾರಿ ಮುಗಿದಿದ್ದು, ಇನ್ನೂ 5 ರಷ್ಟು ಕಾಮಗಾರಿ ಬಾಕಿ ಉಳಿದಿದೆ. ಇನ್ನೂ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರ ಇದ್ದಾಗ ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿ ಸೇರಿ 14 ಕೆರೆಗಳಿಗೆ ನೀರು ತುಂಬಿಸಲು ಅಧಿವೇಶನದಲ್ಲಿ ಅಂಗೀಕಾರವಾಗಿ. ಬಜೇಟ್‌ನಲ್ಲಿ ಸೇರಿಸಿ. ಡಿ.ಪಿ.ಆರ್ ಕೂಡಾ ಆಗಿತ್ತು. ಇನ್ನೇನು ಕಾಮಗಾರಿ ಟೆಂಡರ್ ಆಗಬೇಕು ಅನ್ನುವಾಗ ಸಮ್ಮಿಶ್ರ ಸರ್ಕಾರ ಪತನವಾಯಿತು. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷ ಕಳೆದರು ಬರ ಪೀಡಿತ ಕ್ಷೇತ್ರಕ್ಕೆ ಇನ್ನೂ ನೀರಾವರಿ ಯೋಜನೆ ಪೂರ್ಣವಾಗದೇ ವಂಚಿತವಾಗಿದೆ. ಈ ಬಜೆಟ್‌ನಲ್ಲಿ ಆದರೂ ಕಾಂಗ್ರೆಸ್ ಸರ್ಕಾರ ಕ್ಷೇತ್ರಕ್ಕೆ ನೀರಾವರಿ ಯೋಜನೆ ಒದಗಿಸಲಿ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ತುಂಗಭದ್ರಾ ಜಲಾಶಯವಿದ್ದರೂ ಹೊಸಪೇಟೆ ಹೊರತುಪಡಿಸಿ ಬಹುತೇಕ ಎಲ್ಲ ತಾಲೂಕುಗಳಲ್ಲಿ ನೀರಾವರಿ ಇಲ್ಲ. ತಾಲೂಕುಗಳಲ್ಲಿ ಮಳೆಯಾಶ್ರಿತ ಕೃಷಿಯನ್ನೇ ನೆಚ್ಚಿಕೊಂಡ ಕೃಷಿ ಕಾಲೇಜು, ಹಾಗೂ ವೈದ್ಯಕೀಯ ಕಾಲೇಜು ಆಗಬೇಕಿದೆ. ನೀರಾವರಿ ಯೋಜನೆಗಳು ಈ ಬಜೆಟ್‌ನಲ್ಲಿ ಮನ್ನಣೆ ಸಿಗುವ ನಿರೀಕ್ಷೆಯಿದೆ. ಯಮುನೇಶ್, ಅಧ್ಯಕ್ಷ, ವಿಜಯನಗರ ನಾಗರೀಕ ವೇದಿಕೆ, ಹೊಸಪೇಟೆ ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಹಬ್ ಸ್ಥಾಪಿಸುವ ಮೂಲಕ ಉದ್ಯೋಗಾವಕಾಶ ಮತ್ತು ತರಬೇತಿಗೆ ಆದ್ಯತೆ. ಪ್ರವಾಸೋದ್ಯಮದ ಅಭಿವೃದ್ಧಿ, ಹಂಪಿಯಲ್ಲಿ ಮೂಲಸೌಲಭ್ಯಗಳನ್ನು ಪೂರೈಸಬೇಕಿದೆ. ಪ್ರವಾಸೋದ್ಯಕ್ಕೆ ಆದ್ಯತೆ ಸಿಗುವ ನಿರೀಕ್ಷೆಯಿದೆ. ಅಶ್ವಿನ್ ಕೊತಂಬರಿ, ಜಿಲ್ಲಾಧ್ಯಕ್ಷ, ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ, ವಿಜಯನಗರ.