ಹೊಸಪೇಟೆ: ಶ್ರಾವಣ ಮಾಸದ ಸೋಮವಾರ, ತಾಲೂಕಿನ ಹಂಪಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗೆ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ವಿಶೇಷ ಪೂಜೆ ಸಲ್ಲಿಸಿದರು.
ವಿರೂಪಾಕ್ಷೇಶ್ವರ ವಿಗ್ರಹಕ್ಕೆ ಅಭಿಷೇಕಮಾಡಿದ ಶ್ರೀಗಳು ನೈವೇದ್ಯ ನೆರವೇರಿಸಿ, ಮಹಾಮಂಗಳಾರತಿ ಬೆಳಗಿದರು. ನಂತರ ಅರ್ಚಕರು ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಿದರು. ಪ್ರವಾಸಿ ಮಾರ್ಗದರ್ಶಿಗಳಿಂದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಸಾವಿರಾರು ಭಕ್ತರು, ದೇವರ ದರ್ಶನ ಪಡೆದರು. ದೇವರಿಗೆ ಹಣ್ಣು, ಕಾಯಿ, ಹೂ ಸಮರ್ಪಿಸಿದರು.
ಹೇಮಕೂಟ, ಕಡಲೆಕಾಳು ಗಣಪ, ಸಾಸಿವೆಕಾಳು ಗಣಪ, ಉಗ್ರನರಸಿಂಹ, ವಿಜಯವಿಠ್ಠಲ ದೇಗುಲ, ಕಲ್ಲಿನ ತೇರು, ರಾಣಿ ಸ್ನಾನಗಹ, ಆನೆ ಸಾಲು, ಒಂಟೆ ಸಾಲು, ಮಹಾನವಮಿ ದಿಬ್ಬ ಸೇರಿ ಇತರ ಪ್ರಮುಖ ಸ್ಮಾರಕಗಳ ಬಳಿ ಭಕ್ತರ ದಂಡು ಕಂಡು ಬಂತು. ಸ್ಮಾರಕಗಳ ಮುಂದೆ ಸೆಲ್ಫಿ ತೆಗೆದುಕೊಂಡು ಪ್ರವಾಸಿಗರು ಖುಷಿಪಟ್ಟರು.
ಶ್ರವಾಣ ಸೋಮವಾರ ನಿಮಿತ್ತ ತಾಲೂಕಿನ ಬುಕ್ಕಸಾಗರದ ಏಳು ಹೆಡೆ ನಾಗಪ್ಪ, ನಗರದ ಸಂಡೂರು ರಸ್ತೆ, ನಾಗಪ್ಪನ ಕಟ್ಟೆ, ಅಮರಾವತಿ, ಚಿತ್ತವಾಡ್ಗಿ ಸೇರಿದಂತೆ ಹಲವೆಡೆ ಭಕ್ತರು ನಾಗದೇವತೆಗೆ ವಿಶೇಷ ಪೂಜೆ ನೆರವೇರಿಸಿದರು. ಬೆಳಿಗ್ಗೆಯಿಂದಲೇ ನಾಗ ದೇವತೆ ಹಾಗೂ ಪರಮೇಶ್ವರ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಪೂಜೆ ಸಲ್ಲಿಸಿದ್ದರು. ಹೂ, ಕಾಯಿ, ಹಣ್ಣು, ನೈವೇದ್ಯದ ಸಮರ್ಪಿಸಿದರು.