ಹೊಸಪೇಟೆ: ಶಿಕ್ಷಕರ ಬಹುದಿನದ ಬೇಡಿಕೆಯಾದ, ಅವೈಜ್ಞಾನಿಕ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದಪಡಿ ಮಾಡಿ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನ್ಯಾಯ ಒದಗಿಸಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶಿವಾನಂದ ಬಿಬಿ ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೦೧೬ರಲ್ಲಿ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಯಾದಾಗಿನಿಂದ ನೇವಾನಿರತ ಪದವೀಧರ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ನಿರಂತರವಾಗಿ ಮನವಿ ಮಾಡುತ್ತಾ ಬಂದಿದ್ದರೂ ಸಮಸ್ಯೆ ಬಗೆಹರಿದಿಲ್ಲ. ೨೦೨೫-೨೬ನೇ ಸಾಲಿನಲ್ಲಿ ಪ್ರಾಥಮಿಕ ಶಾಲಾ ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆ ಮಾಡುತ್ತಿರುವುದರಿಂದ ತೊಂದರೆಯಾಗುತ್ತಿದೆ. ಪದವೀಧರ ಶಿಕ್ಷಕರ ಸಮಸ್ಯೆ ಬಗೆಹರಿಯುವವರೆಗೂ ಮರು ಹೊಂದಾಣಿಕೆ ಪ್ರಕ್ರಿಯೆ ಮುಂದೂಡಬೇಕು ಎಂದು ಒತ್ತಾಯಿಸಿದರು.
ಇಲಾಖೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಂಖ್ಯೆ ಕಡಿಮೆ ಇದ್ದು ಹೆಚ್ಚುವರಿ ಮಾಡದೆ, ಶಾಲೆಗೊಬ್ಬರು ದೈಹಿಕ ಶಿಕ್ಷಕ ಹಾಗೂ ಮುಖ್ಯ ಶಿಕ್ಷಕರು ಕರ್ತವ್ಯ ನಿರ್ವಹಿಸುವಂತೆ ಮಾಡಬೇಕು, ಹೆಚ್ಚುವರಿ ಶಿಕ್ಷಕರಿಗೆ ಮುಂದಿನ ವರ್ಗಾವಣೆಗಳಲ್ಲಿ ಸೇವಾವಧಿ ಮಿತಿಗೊಳಿಸದೆ ಮುಕ್ತ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು. ಮುಖ್ಯ ಶಿಕ್ಷಕರ ಹುದ್ದೆಯನ್ನು ಮಕ್ಕಳ ಸಂಖ್ಯೆಗೆ ನಿಗದಿಗೊಳಿಸದೆ ಶಾಲೆಗೊಬ್ಬರನ್ನು ನಿಯೋಜಿಸಬೇಕು. ಮಾರುಕಟ್ಟೆಯಲ್ಲಿ ಮೊಟ್ಟೆ ಧಾರಣೆಗೆ ತಕ್ಕಂತೆ ಮೊಟ್ಟೆಯ ದರ ನಿಗದಿಗೊಳಿಸಿ ಆರ್ಥಿಕ ಹೊರೆ ಕಡಿಮೆಗೊಳಿಸಬೇಕು. ಪಿಎಸ್‌ಟಿ ಶಿಕ್ಷಕರ ಸಮಸ್ಯೆ ಬಗೆಹರಿಯುವವರೆಗೂ ಸರ್ಕಾರ, ಇಲಾಖೆ ನಿಗದಿಪಡಿಸಿರುವ ಪಿಎಸ್‌ಟಿ ಹುದ್ದೆಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ನಂತರ ಸಂಘ ಪದಾಧಿಕಾರಿಗಳು ಡಿಡಿಪಿಐ ವೆಂಕಟೇಶ್ ರಾಮಚಂದ್ರ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೇಟಿಕೆ ಈಡೇರಿಕೆಗೆ ಮನವಿ ಸಲ್ಲಿಸಿದರು. ಸಂಘದ ರಾಜ್ಯ ಉಪಾಯಕ್ಷೆ ಜಿ,ಪದ್ಮಲತಾ, ಜಿಲ್ಲಾ ಅಧ್ಯಕ್ಷ ಶಿವಾನಂದ ಬಿಬಿ, ಪ್ರಮುಖರಾದ ಗಣೇಶ್, ಹೀರಾನಾಯ್ಕ, ಮಾರ್ಗದಪ್ಪ, ಕುಬೇರಚಾರಿ, ಲೋಕಪ್ಪ, ವಿಜಯಕುಮಾರಿ, ನಾಗೇಶ್, ಸಿದ್ದೇಶ್, ಕೋಟ್ರಗೌಡ, ಮರುಳನಗೌಡ, ಜಗದೀಶ್ ಇತರರಿದ್ದರು.