ಹೊಸಪೇಟೆಯ ಟಿಬಿ ಡ್ಯಾಂನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆರು ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಹುಡಾ ಅಧ್ಯಕ್ಷ ಅಶೋಕ್ ಜೀರೆ ಚಾಲನೆ ನೀಡಿದರು. 
ಜಿಲ್ಲೆ

ಹೊಸಪೇಟೆಯಲ್ಲಿ 86 ಲಕ್ಷ ರೂ.ವೆಚ್ಚದ ಸ್ಕೇಟಿಂಗ್ ಅಂಕಣ ನಿರ್ಮಾಣ: ಕಾಮಗಾರಿಗೆ ಹುಡಾ ಅಧ್ಯಕ್ಷ ಅಶೋಕ್ ಜೀರೆ ಚಾಲನೆ

ಹೊಸಪೇಟೆ: ತಾಲೂಕಿನ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಜತೆಗೆ ಸ್ಕೇಟಿಂಗ್ ಅಂಕಣ ಕೂಡ ನಿರ್ಮಾಣಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಹುಡಾ ಅಧ್ಯಕ್ಷ ಅಶೋಕ್ ಜೀರೆ ತಿಳಿಸಿದರು.

ನಗರದ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ಆಯೋಜಿಸಿದ್ದ ಡಿಎಂಎಫ್ ಯೋಜನೆಯಡಿ ಮಂಜೂರಾದ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಬಳ್ಳಾರಿ ನಿರ್ಮಿತಿ ಕೇಂದ್ರದಿಂದ 1.44 ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡಾ ಸಂಕೀರ್ಣದ ವಿವಿಧ ನವೀಕರಣ ಹಾಗೂ ದುರಸ್ತಿ ಕಾಮಗಾರಿ ನಡೆಯಲಿವೆ. ವಿಶೇಷವಾಗಿ 86.54 ಲಕ್ಷ ರೂ. ವೆಚ್ಚದಲ್ಲಿ ಸ್ಕೇಟಿಂಗ್ ಅಂಕಣ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಸ್ಕೇಟಿಂಗ್ ತರಬೇತುದಾರ ಶ್ರವಣ ಕುಮಾರ್ ಮಾತನಾಡಿ, ಜಿಲ್ಲೆಯಲ್ಲೇ ಮೊದಲ ಬಾರಿಗೆ ಸ್ಕೇಟಿಂಗ್ ಅಂಕಣ ಹೊಸಪೇಟೆಯಲ್ಲಿ ನಿರ್ಮಾಣವಾಗುತ್ತಿದೆ ಎಂದರು. ಬಳಿಕ ನಗರದ ಟಿಬಿ ಡ್ಯಾಂನ ಸರ್ಕಾರಿ ಪ್ರೌಢ ಶಾಲೆಯಲ್ಲಿ 6 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಹುಡಾ ಅಧ್ಯಕ್ಷ ಅಶೋಕ್ ಜೀರೆ ಭೂಮಿ ಪೂಜೆ ನೆರವೇರಿಸಿದರು. ಸಚಿವರ ಆಪ್ತ ಸಹಾಯಕರಾದ ಧರ್ಮೇಂದ್ರ ಸಿಂಗ್, ಸಂದೀಪ್ ಸಿಂಗ್, ಹುಡಾ ಮಾಜಿ ಅಧ್ಯಕ್ಷ ಅಯ್ಯಳಿ ತಿಮ್ಮಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಕವಿತಾ ಈಶ್ವರ್ ಸಿಂಗ್, ಒಳಾಂಗಣ ಕ್ರೀಡಾ ಸಂಕೀರ್ಣದ ಮೇಲ್ವಿಚಾರಕಿ ಶ್ವೇತಾ ಇತರರಿದ್ದರು.