ಹೊಸಪೇಟೆ : ಸರ್ಕಾರ ಮತ್ತು ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಕುರಿತು ನಿರ್ಲಕ್ಷ್ಯ ವಹಿಸಿದ್ದು, ಇದೇ ಕಾರಣಕ್ಕೆ ರಾಜ್ಯಾದ್ಯಂತ ಏಕಕಾಲಕ್ಕೆ ಒಂದು ದಿನ ಧರಣಿ ಹಮ್ಮಿಕೊಳ್ಳಾಗಿದೆ ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಜಿಲ್ಲಾ ಪ್ರಧಾನ ಸಂಚಾಲಕ ಹುಲ್ಲು ಬಸಪ್ಪ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ನಿವೃತ್ತ ನೌಕರರಿಗೆ 7ನೇ ವೇತನ ಆಯೋಗದನ್ವಯ ನಿವೃತ್ತಿ ಸೌಲಭ್ಯವನ್ನು ನೀಡಬೇಕೆಂದು ಒತ್ತಾಯಿಸಿ, ಕರ್ನಾಟಕ ನಿವೃತ್ತ ನೌಕರರ ವೇದಿಕೆಯಿಂದ ಅ.1ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಂದೇ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕಪ್ಪು ಪಟ್ಟಿ ಧರಿಸಿ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.
2022ರ ಜುಲೈ 01 ರಿಂದ 2024ರ ಜುಲೈ31ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ 6ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ಡಿ.ಸಿ.ಆರ್.ಜಿ. ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯವನ್ನು ನೀಡಿದ್ದಾರೆ. ಇದರಿಂದ 12ರಿಂದ 22 ಲಕ್ಷ ಆರ್ಥಿಕ ನಷ್ಟ ಉಂಟಾಗಿ ಅನ್ಯಾಯವಾಗಿದೆ. ಆದರೆ, ನಾವು ರಾಜ್ಯದ ಕಾರ್ಯಾಂಗದಲ್ಲಿ 7.50 ಲಕ್ಷ ನೌಕರರಲ್ಲಿ 1.50 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದರೂ ಕೆಲಸದ ಒತ್ತಡದಲ್ಲಿ 30ರಿಂದ 40 ವರ್ಷ ಸುದೀರ್ಘ ಸೇವೆ ಸಲ್ಲಿಸಿದ ನಮ್ಮನ್ನು ಕಡೆಗಣಿಸಲಾಗಿದೆ. ವಿಜಯನಗರ ಜಿಲ್ಲೆಯಲ್ಲಿಯೂ ಎಲ್ಲ ಇಲಾಖೆಗಳಲ್ಲಿ 500ಕ್ಕೂ ಹೆಚ್ಚು ನೌಕರರು ನಿವೃತ್ತಿ ಹೊಂದಿದ್ದಾರೆ. ಡಿ ಗ್ರೂಪ್ ನೌಕರರಿಗೆ 4ರಿಂದ 6 ಲಕ್ಷ ಮತ್ತು ಎ ವೃಂದದ ನೌಕರರಿಗೆ 12ರಿಂದ 14 ಲಕ್ಷ ಆರ್ಥಿಕ ನಷ್ಟವಾಗಿದೆ. ಆದ್ದರಿಂದ ನಮ್ಮ ನ್ಯಾಯಯುತ ಬೇಡಿಕೆಯನ್ನು ಪರಿಗಣಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ನಿವೃತ್ತ ನೌಕರರ ವೇದಿಕೆಯ ರಾಜ್ಯ ಸಂಚಾಲಕ ಟಿ.ಕೆ.ವೆಂಕಟೇಶ್, ತಾಲೂಕು ಸಂಚಾಲಕ ಬೇಲೂರು ಅಜ್ಜಪ್ಪ, ಎಚ್.ಜೀವಣ್ಣ, ಎ.ಕೊಟ್ರೇಶ್, ಮಂಜುನಾಥ, ಶಂಭುಲಿAಗಪ್ಪ, ರಾಯಪ್ಪ, ಶಿಕ್ಷಕರ ಸಂಘದ ಬಸವರಾಜ, ಕಡ್ಲಿ ವೀರಭದ್ರ ಇದ್ದರು.