ಹೊಸಪೇಟೆ: ಒಳ ಮೀಸಲಾತಿ ವಿರೋಧಿ ಹೋರಾಟಗಾರರ ಮೇಲೆ ಪ್ರಕರಣ ದಾಖಲು ಮಾಡಿ, ಸಮುದಾಯಕ್ಕೆ ಬೆದರಿಸುವ ತಂತ್ರಾರಿಕೆ ನಡೆದಿದೆ ಎಂದು ಒಳಮೀಸಲಾತಿ ವಿರೋಧಿ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ ಅಂಗಡಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರ ಜಾರಿ ಮಾಡಿರುವ ಒಳ ಮೀಸಲಾತಿ ವಿರೋಧಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತಮ್ಮ ನ್ಯಾಯಯುತ ಬೇಡಿಕೆಗಳಿಗೆ ಒತ್ತಾಯಿಸಿ, ಪ್ರತಿಭಟನೆ, ಹೋರಾಟ ನಡೆಯಬಾರದು ಎಂದರೆ ರಾಜ್ಯ ಸರ್ಕಾರ ಅದಕ್ಕೂ ಒಂದು ಶಾಸನ ಜಾರಿ ಮಾಡಲಿ. ನಮ್ಮ ಸಮಾಜದ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಹಾಗೂ ಕೆಲವೊಂದು ರಾಜಕಾರಣಿಗಳ ಕುಮ್ಮಕ್ಕಿನಿಂದ ಪ್ರಕರಣ ದಾಖಲಿಸಲಾಗಿದೆ. ಈ ತರಹ ಪ್ರಕರಣ ದಾಖಲಿಸಿದರೆ, ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಇಂತಹ ನೂರು ಪ್ರಕರಣಗಳು ದಾಖಲಾದರೂ ಬಂಜಾರ ಸಮಾಜಕ್ಕೆ ಸಿಗಬೇಕಾದ ನ್ಯಾಯಯುತ ಮೀಸಲಾತಿಗಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಲಂಬಾಣಿ, ಭೋವಿ, ಕೊರಚ, ಕೊರಮ ಸಮಾಜಕ್ಕೆ ಶೆ.07 ರಷ್ಟು ಮೀಸಲಾತಿ ನೀಡುವ ವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ರಾಷ್ಟಿçÃಯ ಗೋರ್‌ಬಂಜಾರ್ ಮಳಾವ್ ರಾಜ್ಯ ಸಂಚಾಲಕ ಲಿಂಬ್ಯಾನಾಯ್ಕ ಮಾತನಾಡಿ, ಸರ್ಕಾರಕ್ಕೆ ಒಂದು ವಾರ ಕಾಲ ಗಡುವು ನೀಡುತ್ತೇವೆ. ಒಂದು ವಾರದೊಳಗೆ ಪ್ರತಿಭಟನಾನಿರತರ ಮೇಲೆ ಪ್ರಕರಣ ದಾಖಲಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡದಿದ್ದರೆ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ಯಾವುದೇ ಅನಾಹುತವಾದರೆ ಅದಕ್ಕೆ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.
ಸಂಡೂರು ತಾಲೂಕಿನ ಸುಶೀಲನಗರದ ಬಂಜಾರ ಪೀಠದ ತಿಪ್ಪೇಸ್ವಾಮಿ ಸ್ವಾಮೀಜಿ, ಪ್ರಮುಖರಾದ ಗೋವಿಂದ್‌ನಾಯ್ಕ, ಶಿವಕುಮಾರ್‌ನಾಯ್ಕ, ಅಲೋಕ್ ನಾಯ್ಕ್, ಹನುಮ ನಾಯ್ಕ್ ಇದ್ದರು.