ಜಿಲ್ಲೆ

ಮೀಸಲಾತಿ ಜಾರಿ ನಂತರ ಚುನಾವಣೆ ಮಾಡಿ

ಹೊಸಪೇಟೆ: ಮೀಸಲಾತಿ ಕಾಯ್ದೆ ಜಾರಿಗೊಳಿಸಿ ನಂತರ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಬೇಕೆಂದು ವಿಜಯನಗರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ತಹಸೀಲ್ದಾರ್ ಶೃತಿ ಎಂ.ಮಳ್ಳನಗೌಡ್ರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ರವಾನಿಸಲಾಯಿತು.

ಒಕ್ಕೂಟದ ಜಿಲ್ಲಾಧ್ಯಕ್ಷ ವೈ.ಯಮುನೇಶ್ ಮಾತನಾಡಿ, ದಿ.ರಾಜೀವ್‌ಗಾಂದಿಯವರು ದೇಶದ ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಿದ ಸಂವಿಧಾನದ 73ನೇ ತಿದ್ದುಪಡಿಯನ್ನು ಆಧಾರವಾಗಿಟ್ಟುಕೊಂಡು ರಾಜ್ಯದಲ್ಲಿ ಪಂಚಾಯತ್ ರಾಜ್ ಕಾಯ್ದೆಯು 1993 ರಿಂದ ಜಾರಿಗೆ ಬಂದಿದೆ. ಗ್ರಾಮ, ತಾಲೂಕು, ಹಾಗೂ ಜಿಲ್ಲಾ ಪಂಚಾಯಿತಿ ಎಂಬ ಮೂರು ಹಂತದಲ್ಲಿ ಅಧಿಕಾರ ವಿಕೇಂದ್ರಿಕರಣದ ಮೂಲಕ ಸ್ಥಳೀಯ ಮತದಾರರು ಸ್ಥಳೀಯವಾಗಿ ತಮ್ಮ ಪ್ರತಿನಿಧಿಗಳನ್ನು ಚುನಾಯಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಈ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳಿಗೆ ನಿಗಧಿಪಡಿಸಿರುವ ಮೀಸಲಾತಿ ಅತ್ಯಂತ ಅವೈಜ್ಞಾನಿಕವಾಗಿದೆ. ರಾಜ್ಯದಲ್ಲಿ ಶೇ.35 ರಷ್ಟಿರುವ ರಾಜಕೀಯವಾಗಿ ಅತೀ ಹಿಂದುಳಿದಿರುವ ಜಾತಿಗಳಿಗೆ ಅತ್ಯಲ್ಪ ಮೀಸಲಾತಿ ನೀಡಿರುವುದು ನ್ಯಾಯೋಚಿತವಲ್ಲ. ಸುಪ್ರೀಂ ಕೋರ್ಟ್ನ ತೀರ್ಪಿನಂತೆ ಜಸ್ಟೀಸ್ ಕೆ.ಭಕ್ತವತ್ಸಲಂ ಆಯೋಗವು ಪಂಚಾಯಿತಿ ವ್ಯವಸ್ಥೆಯಲ್ಲಿ ರಾಜಕೀಯವಾಗಿ ಹಿಂದುಳಿದ ಜಾತಿಗಳಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕೆಂದು 2022ರಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಹಿಂದುಳಿದ ಜಾತಿಗಳಿಗೆ ರಾಜಕೀಯ ಮೀಸಲಾತಿ ಇಲ್ಲದಿರುವಾಗ ಕನಿಷ್ಠ ಸ್ಥಳೀಯ ಸಂಸ್ಥೆಗಳಲ್ಲಾದರೂ ಈ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವುದು ಸರ್ಕಾರದ ಸಂವಿಧಾನಾತ್ಮಕ ಜವಾಬ್ದಾರಿಯಾಗಿದೆ. ಆದ್ದರಿಂದ ಜಸ್ಟೀಸ್ ಕೆ.ಭಕ್ತವತ್ಸಲಂ ಆಯೋಗದ ಶಿಫಾರಸ್ಸಿನಂತೆ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಕ್ಕೆ ಶೇ.33 ರಷ್ಟು ಮೀಸಲಾತಿ ಕಾಯ್ದೆ ಜಾರಿಗೊಳಿಸಿದ ನಂತರವೇ ತಾಲೂಕು ಮತ್ತು ಜಿ.ಪಂ. ಚುನಾವಣೆ ನಡೆಸಬೇಕೆಂದು ಆಗ್ರಹಿಸಿದರು.

ಪ್ರಮುಖರಾದ ಯು.ಆಂಜನೇಯಲು, ಪ್ರೋ.ಉಮಾಮಹೇಶ್ವರ, ಪಂಪಣ್ಣ, ವೆಂಕೋಬಪ್ಪ, ಈ.ಕುಮಾರಸ್ವಾಮಿ, ಈ.ರಾಘವೇಂದ್ರ, ಸಣ್ಣಮಾರೆಪ್ಪ, ಪರಮೇಶ್, ಕೆ.ಶ್ರೀನಿವಾಸ್, ಎಂ.ಕೆ.ಬಾಷ, ಕೆ.ತಿಪ್ಪೇಸ್ವಾಮಿ, ಬಿ.ವಿರುಪಾಕ್ಷಪ್ಪ, ಯು.ಅಶ್ವಥಪ್ಪ ಇತರರಿದ್ದರು.