ಹೊಸಪೇಟೆ: ಜಿಲ್ಲೆಯಲ್ಲಿ ಗುರುವಾರವೂ ಮಳೆ ಮುಂದುವರಿದಿದ್ದು, ಜನತೆ ಪರದಾಡುವಂತಾಯಿತು.
ಬುಧವಾರ ಇಡೀ ದಿನ ಬಿದ್ದ ಆಶ್ಲೇಷಾ ಮಳೆ, ಗುರುವಾರ ಬೆಳಗ್ಗೆ ಸ್ವಲ್ಪ ಬಿಡುವು ನೀಡಿತ್ತು. ಆದರೆ, ಮಧ್ಯಾಹ್ನದ ನಂತರ ತುಂತುರು, ಜಿಟಿ ಜಿಟಿ ಮಳೆ ಶುರುವಾಯಿತ್ತಲ್ಲದೇ ವಾಹನ ಸವಾರರು ಸೇರಿದಂತೆ ಸಾರ್ವಜನಿಕರ ಪರದಾಡುವಂತೆ ಮಾಡಿತು. ಕೆಲದಿನಗಳಿಂದ ಜಿಲ್ಲಾದ್ಯಂತ ಮಳೆಯಾಗಿದ್ದು, ಜನ ಜೀವನ ಅಕ್ಷರಶಃ ಅಸ್ತವ್ಯಸ್ತಗೊಂಡಿತು. ಮಳೆಯೊಂದಿಗೆ ಶೀತಗಾಳಿಯು ಸೇರಿದ್ದರಿಂದ ಸಾಕಷ್ಟು ಚಳಿ ಮನೆ ಮಾಡಿತ್ತು. ಹೀಗಾಗಿ ಒಳಗಿದ್ದ ಸ್ವೆಟರ್, ಜರ್ಕಿನ್, ಬೆಚ್ಚನೆಯ ಟೋಪಿಗಳು ಹೊರ ಬಂದಿದ್ದವು. ಮಳೆಯ ಕಾರಣಕ್ಕೆ ಛತ್ರಿಗಳು ಜನತೆಗೆ ಆಶ್ರಯವಾಗಿದ್ದವು.
ಶಾಲೆ ಮಕ್ಕಳ ಪರದಾಟ:
ಶಾಲೆ ಬಿಡುವ ವೇಳೆಗೆ ಮಳೆ ಬೀಳುತ್ತಿದ್ದ ಕಾರಣ ವಿದ್ಯಾರ್ಥಿಗಳು ಸಹ ಮನೆಗೆ ತೆರಳಲು ಸಾಕಷ್ಟು ಪರದಾಡಬೇಕಾಯಿತು. ಪ್ರಮುಖ ರಸ್ತೆಗಳನ್ನು ಹೊರತು ಪಡಿಸಿ, ಉಳಿದ ಸಣ್ಣ, ಪುಟ್ಟ ರಸ್ತೆಗಳು ಕೆಸರುಮಯವಾದ್ದರಿಂದ ಕಾಲ್ನಡಿಗೆಯಲ್ಲಿ ಹೋಗುವವರು, ವಾಹನಗಳಲ್ಲಿ ತೆರಳುವವರು ಸಾಕಷ್ಟು ಕಿರಿಕಿರಿ ಅನುಭವಿಸಬೇಕಾಯಿತು. ಶಾಲಾ ಮಕ್ಕಳು ಸರ್ಕಸ್ ಮಾಡುವಂತಾಯಿತು.
ವ್ಯಾಪಾರಸ್ಥರಿಗೂ ತೊಂದರೆ:
ಕೆಲ ದಿನಗಳಿಂದ ಬೀಳುತ್ತಿರುವ ಜಿಟಿ ಜಿಟಿ ಮಳೆ ವ್ಯಾಪಾರಸ್ಥರ ವಹಿವಾಟಿನ ಮೇಲೂ ಪರಿಣಾಮ ಬೀರಿದೆ. ಅದರಲ್ಲೂ ಬೀದಿ ಬದಿ ವ್ಯಾಪಾರಿಗಳಿಗೆ ಎರಡು ದಿನದಿಂದ ಸಾಕಷ್ಟು ನಷ್ಟವಾಗಿದೆ. ಜನ ಸಂಚಾರ ಹೆಚ್ಚು ಇಲ್ಲದಿರುವುದು ಒಂದು ರೀತಿಯಲ್ಲಿ ವ್ಯಾಪಾರದ ಮೇಲೆ ಪರಿಣಾಮ ಬೀರಿದರೆ, ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು ತೊಂದರೆಗೆ ಸಿಲುಕಿದ್ದಾರೆ. ಅದೇ ರೀತಿ ಕಾರ್ಮಿಕರಿಗೂ ಇದೊಂದು ರೀತಿಯಲ್ಲಿ ಹೊಡೆತ ನೀಡಿದೆ.
ಮುಂಗಾರು ಪ್ರವೇಶಕ್ಕೆ ಪೂರ್ವ ಮುಂಗಾರು ಉತ್ತಮವಾಗಿ ಮಳೆಯಾಗಿದೆ. ಜಿಲ್ಲಾದ್ಯಾಂತ 13 ದಿನಗಳಲ್ಲಿ ಸರಾಸರಿಯಲ್ಲಿ 36 ಮಿಮೀ ಮಳೆಗೆ 87 ಮಿಮೀ ಮಳೆಯಾಗಿದೆ. ಇನ್ನೂ ಗುರುವಾರ ಬೆಳಗ್ಗೆ 8 ಗಂಟೆ ವೇಳೆಗೆ 24 ಗಂಟೆಯಲ್ಲಿ 1.7 ಮಿಮೀ ಮಳೆಗೆ 7.4 ಮಿಮೀ ಮಳೆಯಾಗಿದೆ. ಹೊಸಪೇಟೆ ತಾಲೂಕಿನಲ್ಲಿ 24.3 ಮಿಮೀ ಮಳೆಯಾಗಿದೆ. ಹೂವಿನಹಡಗಲಿ 1.7 ಮಿ.ಮೀ ಮಳೆಯಾಗಿದೆ. ಹಗರಿಬೊಮ್ಮನಹಳ್ಳಿ 11.6 ಮಿ.ಮೀ ಮಳೆಯಾಗಿದೆ. ಹರಪನಹಳ್ಳಿ 2.2 ಮಿ.ಮೀ ಮಳೆಗೆ, ಕೊಟ್ಟೂರು 8.7 ಮಿ.ಮೀ ಮಳೆಯಾಗಿದೆ. ಕೂಡ್ಲಿಗಿ 7.4 ಮಿ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.
ಜಿಲ್ಲೆಯಲ್ಲಿ ಗುರುವಾರದ ಸಂಜೆ ಕಳೆದ 48 ಗಂಟೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 16 ಮನೆಗಳು ಹಾನಿಯಾಗಿದೆ. ಕೂಡ್ಲಿಗಿ ಭಾಗದಲ್ಲಿ 1.1 ಹೆಕ್ಟೇರ್ ಪ್ರದೇಶದಲ್ಲಿ ಮಳೆಗೆ ತಮಾಟೋ ಹಾಗೂ ಸೌತೆಕಾಯಿ ಬೆಳೆ ಹಾನಿಯಾಗಿದೆ. ಕೂಡ್ಲಿಗಿಯಲ್ಲಿ 13 ಮನೆಗಳು ಹಾನಿಯಾಗಿವೆ. ಕೊಟ್ಟೂರಿನಲ್ಲಿ ಎರಡು ಮನೆಗಳು ಹಾಗೂ ಹಗರಿಬೊಮ್ಮನಹಳ್ಳಿಯಲ್ಲಿ ಒಂದು ಮನೆಗಳು ಹಾನಿಯಾಗಿದೆ ಎಂದು ಕೃಷಿ ಇಲಾಖೆಯ ಮಾಹಿತಿ.