ಹೊಸಪೇಟೆ: ನಗರ ಸೇರಿದಂತೆ ಜಿಲ್ಲಾಧ್ಯಾಂತ ಭಾನುವಾರ ಧಾರಕಾರ ಮಳೆಯಾಗಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ವರ್ಷಧರೆಗೆ ನಗರದ ಮನೆ, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ಜಿಲ್ಲೆಯಾದ್ಯಂತ ಕೆಲ ದಿನಗಳಿಂದ ನಿರಂತವಾಗಿ ಉತ್ತಮ ಮಳೆಯಾಗಿದೆ. ಅದರಲ್ಲೂ ಹೊಸಪೇಟೆ ಭರ್ಜರಿ ಮಳೆ ಸುರಿದಿದೆ. ರಸ್ತೆಗಳಲ್ಲೂ ನೀರು ನಿಂತಿದ್ದು, ಮನೆಗಳಿಗೂ ನೀರು ನುಗ್ಗಿದೆ. ನಗರದಲ್ಲಿ ಗಗನದೆತ್ತರದ ಮಹಲ್‌ಗಳು ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ವ್ಯವಸ್ಥಿತ ಚರಂಡಿ, ಪಾರ್ಕಿಂಗ್ ನಿರ್ಮಾಣ ಮಾಡದೇ ರಸ್ತೆಗಳಲ್ಲೇ ನೀರು ನಿಲ್ಲುವಂತಾಗಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ನಗರಸಭೆ ಅಸಮರ್ಪಕ ಯೋಜನೆ ರೂಪಿಸಿದ್ದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲುವಂತಾಗಿದೆ. ಹಾಗಾಗಿ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಮನೆ ಮಂದಿಯೆಲ್ಲಾ ನೀರು ಹೊರ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಯಿಂದಾಗಿ ಹೂ-ಹಣ್ಣ-ತರಕಾರಿ ವ್ಯಾಪಾರಿಗಳು ಸಂಕಷ್ಟಕ್ಕೀಡಾದರು. ನಗರದ ಹೊರವಲಯದ ಬುಡ್ಗಾ ಜಂಗಮ ಕಾಲೋನಿಯಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅಲೆಮಾರಿ ಕುಟುಂಬಗಳು ತೀವ್ರ ತೊಂAದರೆ ಅನುಭವಿಸಿದರು. ನಗರದ ಐಎಸ್‌ಆರ್ ಸಕ್ಕರೆ ಕಾರ್ಖಾನೆ ರಸ್ತೆ, ಹೂಡಾ ಕಚೇರಿ ಆವರಣ, ತಾಲ್ಲೂಕು ಕ್ರೀಡಾಂಗಣ, ಸಾಯಿ ಬಾಬಾ ಸರ್ಕಲ್‌ನಿಂದ ಗುಜ್ಜಲ ಪೆಟ್ರೋಲ್ ಬಂಕ್, ಕಾಲೇಜ್ ರಸ್ತೆ, ಚಪ್ಪದರಳ್ಳಿ, ದೋಬಿ ಘಾಟ್, ಎಸ್.ಆರ್. ನಗರ, ಸಿದ್ದ ಲಿಂಗಪ್ಪ ಚೌಕಿ, ಚಿತ್ತವಾಡ್ಗಿ ಸೇರಿದಂತೆ ನಗರದ ತಗ್ಗು ಪ್ರದೇಶದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿವೆ.
ಪಾದಚಾರಿಗಳಿಂದ ಪರದಾಟ:
ನಗರದ ಕಾಲೇಜು ರಸ್ತೆ, ಮೇನ್ ಬಜಾರ್, ಹಂಪಿ ರಸ್ತೆ, ಡ್ಯಾಂ ರಸ್ತೆ, ಬಳ್ಳಾರಿ ರಸ್ತೆಗಳಲ್ಲಿ ನೀರು ನಿಂತಿದ್ದರಿAದ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡಿದರು. ಮಧ್ಯಾಹ್ನ ತುಂತುರು ಮಳೆ ಆರಂಭವಾಯಿತು. ಸಂಜೆ 4 ಗಂಟೆಯಿAದ ರಭಸ ಪಡೆದ ಮಳೆಗೆ ಬರೋಬ್ಬರಿ ಒಂದು 3 ಗಂಟೆಗೂ ಹೆಚ್ಚು ಕಾಲ ಭರ್ಜರಿ ಸುರಿದಿದ್ದರಿಂದ ನಗರದ ಇಡೀ ಚಿತ್ರಣವೇ ಬದಲಾಗಿತ್ತು. ನಳನಳಿಸುತ್ತಿದ್ದ ಡಾಂಬಾರು ರಸ್ತೆಗಳಲ್ಲೂ ನೀರು ನಿಂತು, ಹೊಂಡವಾಗಿ ಮಾರ್ಪಟ್ಟಿದ್ದವು.