ಹೊಸಪೇಟೆ: ಸಣ್ಣ ಮಳೆಯಾದರೂ ಮನೆಗೆ ನೀರು ನುಗ್ಗುತ್ತದೆ. ಅಧಿಕಾರಿಗಳು ಪರಿಹಾರ ಧನ ನೀಡಿ ಕೈತೊಳೆದುಕೊಳ್ಳುತ್ತಾರೆ. ಶಾಶ್ವತ ಪರಿಹಾರ ಒದಗಿಸುತ್ತಿಲ್ಲ ಎಂದು 15ನೇ ವಾರ್ಡ್‌ನ ಇಂದಿರಾ ನಗರದ ನಿವಾಸಿಗಳು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಎದುರು ಶುಕ್ರವಾರ ಅಳಲು ತೋಡಿಕೊಂಡರು.
ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿದ ಸಚಿವೆ ಶಶಿಕಲಾ ಜೊಲ್ಲೆ ಬಳಿ ಸಮಸ್ಯೆ ಹೇಳಿಕೊಂಡ ನಿವಾಸಿಗಳಾದ ಎಂ.ಕೆ.ವಿಜಯಕುಮಾರ್, ಪರಮೇಶ್ವರಪ್ಪ ಮತ್ತಿತರರು, ಹಲವು ದಶಕಗಳಿಂದ ಇಲ್ಲೇ ನೆಲೆಸಿದ್ದೇವೆ. ಮಳೆಗಾಲದಲ್ಲಿ ಇಲ್ಲಿನ ರಾಜಕಾಲುವೆ ತುಂಬಿ ಹರಿಯುತ್ತದೆ. ಮೇಲ್ಭಾಗದಿಂದ ಹೆಚ್ಚಿನ ನೀರು ಹರಿದು ಬರುತ್ತದೆ. ಕಾಲುವೆಯಲ್ಲಿ ನೀರು ಮುಂದೆ ಹರಿಯದೇ ಮನೆಗಳಿಗೆ ನುಗ್ಗತ್ತವೆ ಹೇಳಿದರು. ಬಹತೇಕ ಮನೆಗಳಲ್ಲಿ ಮೊಣಕಾಲು ಮಟ್ಟಕ್ಕೆ ನೀರು ನಿಂತಿತ್ತು. ಅಡುಗೆ ಪಾತ್ರೆಗಳು ತೇಲಾಡುತ್ತಿದ್ದವು. ಆಹಾರ ಸಾಮಗ್ರಿಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ ಎಂದ ನಿವಾಸಿಗಳಾದ ರೇಣುಕಾ, ದೊಡ್ಡ ಮಾರೆವ್ವ, ತಿರುಮಲಮ್ಮ ವಿವರಿಸಿದರು.
ಪ್ರತಿಕ್ರಿಯಿಸಿದ ಸಚಿವೆ ಶಶಿಕಲಾ ಜೊಲ್ಲೆ, ಹಲವು ದಶಕಗಳಿಂದ ಇದೇ ಸಣ್ಣ ಪುಟ್ಟ ಗಲ್ಲಿಗಳಲ್ಲೇ ಜೀವನ ಸವೆಸಿದ್ದೀರಿ. ತಾವೆಲ್ಲರೂ ಒಪ್ಪಿದರೆ ತಮಗಾಗಿ ಆಶ್ರಯ ಕಾಲನಿ ನಿರ್ಮಿಸಿ ಅಲ್ಲಿಗೆ ಸ್ಥಳಾಂತರಿಸಲಾಗುವುದು. ನಿವೇಶನದ ಜತೆಗೆ ಸರ್ಕಾರದಿಂದಲೇ ಸುಸಜ್ಜಿತ ಮನೆ ನಿರ್ಮಿಸಿಕೊಡಲಾಗುವುದು. ಚರಂಡಿ, ರಸ್ತೆ ಮತ್ತಿತರ ಸೌಕರ್ಯಗಳನ್ನು ಒದಗಿಸಲಾಗುವುದು. ಇಲ್ಲೇ ಇರಲು ಬಯಸಿದರೆ, ರಾಜಕಾಲುವೆ ನೀರು ಮನೆಗಳಿಗೆ ನುಗ್ಗದಂತೆ ಸೂಕ್ತ ಕ್ರಮ ವಹಿಸಲಾಗುವುದು. ಕೊಳಚೆ ಪ್ರದೇಶವೆಂದು ಘೋಷಿಸಿ, ಅಗತ್ಯ ಸೌಲಭ್ಯ ಒದಗಿಸಲಾಗುವುದು. ನಂತರ ಇಂದಿರಾ ನಗರದ 54 ಸೇರಿ 64 ಜನರಿಗೆ ತಲಾ 10 ಸಾವಿರ ರೂ. ಪರಿಹಾರ ಧನ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ ಎಂದರು.
ಜಿ.ಪಂ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್, ಸಹಾಯಕ ಆಯುಕ್ತ ಸಿದ್ರಾಮೇಶ್ವರ, ತಹಸೀಲ್ದಾರ್ ವಿಶ್ವಜೀತ್ ಮೆಹತಾ, ನಗರಸಭೆ ಪೌರಾಯುಕ್ತ ಮನೋಹರ ಇದ್ದರು.