ಜಿಲ್ಲೆ

ನಿಜ ಬದುಕಿನ ದರ್ಶನವೇ ದಾಸಸಾಹಿತ್ಯ

ಮಂಜುನಾಥ

ಹೊಸಪೇಟೆ: ಪುರಂದರದಾಸರಿಗೂ, ಕನ್ನಡ ವಿವಿಗೂ ಎರಡು ರೀತಿಯ ಸಂಬAಧವಿದೆ. ಪುರಂದರದಾಸರು ಓಡಾಡಿದ ಹಂಪಿಯ ನೆಲದ ಪಕ್ಕದಲ್ಲಿ ಕನ್ನಡ ವಿವಿ ನೆಲೆಗೊಂಡಿದೆ. ಪುರಂದರದಾಸರು ಬರಿಗೈ ದಾಸರಾಗಿದ್ದರು. ಕನ್ನಡ ವಿವಿಯ ಬರಿಗೈ ಆಗಿದೆ ಎಂದು ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಬೇಸರ ವ್ಯಕ್ತಪಡಿಸಿದರು.

ಕನ್ನಡ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಗುರುವಾರ ಪುರಂದರದಾಸರ ೪೬೧ನೇ ಆರಾಧನೆಯ ನಿಮಿತ್ತ ಪುರಂದರದಾಸರ ಕೀರ್ತನೆಗಳಲ್ಲಿ ಭಕ್ತಿ ಮತ್ತು ಸಂಗೀತದ ವಿಶೇಷ ಉಪನ್ಯಾಸ ಹಾಗೂ ಕೀರ್ತನ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾಡಿದರು.

ವಚನ ಸಾಹಿತ್ಯ ಪರಂಪರೆಯು ಹರನನ್ನು ಶ್ರೇಷ್ಠ ಎಂದರೆ ದಾಸಸಾಹಿತ್ಯ ಪರಂಪರೆಯು ಹರಿಯನ್ನು ಶ್ರೇಷ್ಠನನ್ನಾಗಿಸಿದೆ. ಎರಡು ಪರಂಪರೆಗಳು ಭಕ್ತಿಯ ತಳಹದಿಯ ಮೇಲಿದ್ದರೂ ವಚನ ಸಾಹಿತ್ಯವು ವೈಚಾರಿಕತೆಗೆ ಪ್ರಾಧಾನ್ಯತೆ ನೀಡಿದರೆ, ದಾಸಸಾಹಿತ್ಯವು ಆತ್ಮಾನುಸಂಧಾನಕ್ಕೆ ಪ್ರಾಧಾನ್ಯತೆ ನೀಡುತ್ತದೆ. ಜನಸಾಮಾನ್ಯರಲ್ಲಿ ದಾಸಸಾಹಿತ್ಯವು ಜನಪ್ರಿಯವಾಗಿದೆ. ನಿಜ ಬದುಕಿನ ದರ್ಶನ ಮಾಡಿಸುವುದೇ ದಾಸಸಾಹಿತ್ಯ. ಮನುಷ್ಯನ ಹೃದಯ ಮೃದು ಮಾಡುವುದೇ ಕನ್ನಡ ಸಾಹಿತ್ಯ ಪರಂಪರೆಯ ಹೂರಣ ಎಂದರು.

ಮೈಸೂರಿನ ಕಥಾಕೀರ್ತನಕಾರ ಬಿಳಿಕೆರೆ ಬಿ.ಎಸ್.ಗಂಗಾಧರ ಆಚಾರ್ ಮಾತನಾಡಿ, ಪುರಂದರದಾಸರ ಕಾಲದ ಜನಜೀವನಕ್ಕೆ ನೆಮ್ಮದಿ ಬೇಕಾಗಿತ್ತು. ಅದಕ್ಕಾಗಿ ಜನರ ಜೀವನ ಭಕ್ತಿಯ ಪರಕಾಷ್ಠತೆ ತಲುಪಿತ್ತು. ಭಕ್ತಿಯೆಂದರೆ ಅನುರಾಗ, ಭಕ್ತಿಯು ಅವಿರೋಧವಾಗಿ ಆತ್ಮಾನಂದ ಕೊಡುತ್ತದೆ. ಕೀರ್ತನೆಗಳ ಮೂಲಕ ಪುರಂದರದಾಸರು ಸಮಾಜದ ಮನಸ್ಸುಗಳನ್ನು ತಿದ್ದಲು ಪ್ರಯತ್ನಿಸಿದರು ಎಂದರು.

ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾದ ಡಾ.ವೀರೇಶ ಬಡಿಗೇರ, ಪುರಂದರದಾಸ ಅಧ್ಯಯನ ಪೀಠದ ಸಂಚಾಲಕ ಡಾ.ಎಸ್.ಆರ್. ಚನ್ನವೀರಪ್ಪ, ಪ್ರಾದ್ಯಾಫಕರಾದ ಡಾ.ಎಫ್.ಟಿ.ಹಳ್ಳಿಕೇರಿ, ಡಾ.ಶಿವಾನಂದ ಎಸ್.ವಿರಕ್ತಮಠ, ಮಾಹಿತಿಕೇಂದ್ರದ ನಿರ್ದೇಶಕಿ ಡಾ.ಡಿ.ಮೀನಾಕ್ಷಿ ಇತರರಿದ್ದರು.