ಹೊಸಪೇಟೆ: ಸಹೋದರರು ಸದಾ ತಮ್ಮ ನೆರಳಾಗಿರಲಿ ಎಂಬ ಉದ್ದೇಶದಿಂದ ಸಹೋದರಿಯರು ಕಟ್ಟುವ ರಕ್ಷಾ ಬಂಧನ ಹಬ್ಬದ ನಿಮಿತ್ತ ಶನಿವಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಕಳೆಗಟ್ಟಿತ್ತು.
ತರಹೇವಾರಿ ರಾಖಿಗಳನ್ನು ಖರೀದಿಸಿ ತಂದಿದ್ದ ಸಹೋದರಿಯರು ಬೆಳಿಗ್ಗೆಯೇ ತಮ್ಮ ಸಹೋದರರಿಗೆ ಕಟ್ಟಿದರು. ನಂತರ ಅಣ್ಣ, ತಮ್ಮಂದಿರು ರಾಖಿ ಕಟ್ಟಿದ್ದಕ್ಕಾಗಿ ಹಣ, ಉಡುಗೊರೆಯನ್ನು ತಟ್ಟೆಯಲ್ಲಿಟ್ಟು ಖುಷಿಪಡಿಸಿದರು. ನಂತರ ಮನೆಯಲ್ಲಿ ತಯಾರಿಸಿದ ಸಿಹಿ ಅಡುಗೆಯನ್ನು ಊಟ ಮಾಡಿದರು. ಶುಕ್ರವಾರದಿಂದಲೇ ಮಾರುಕಟ್ಟೆಗೆ ದಾಂಗುಡಿ ಇಟ್ಟಿದ್ದ ಮಹಿಳೆಯರು ವಿವಿಧ ಬಗೆಯ ರಾಖಿಗಳನ್ನು ಖರೀದಿಸಿ ತಂದಿದ್ದರು. ಬೇರೆ ಊರಿನಲ್ಲಿ ಉದ್ಯೋಗ ಮತ್ತಿತರ ಕಾರ್ಯ ನಿಮಿತ್ತ ತೆರಳಿದ್ದ ಯುವಕರು ರಕ್ಷಾ ಬಂಧನ ಹಬ್ಬದ ನಿಮಿತ್ತ ಮನೆಗೆ ಬಂದು ರಾಖಿ ಕಟ್ಟಿಸಿಕೊಂಡರು. ಮಹಿಳೆಯರೂ ಗಂಡನ ಮನೆಯಿಂದ ತವರು ಮನೆಗೆ ತೆರಳಿ ತಮ್ಮ ಒಡಹುಟ್ಟಿದವರು ಹಾಗೂ ದೂರದ ಸಹೋದರ ಸಂಬAಧಿಗಳಿಗೆ ರಾಖಿ ಕಟ್ಟಿದರು.
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್ಆ್ಯಪ್, ಇನ್‌ಸ್ಟಾ ಗ್ರಾಂ ಮೂಲಕವೂ ಮಹಿಳೆಯರು ತಮ್ಮ ಸಹೋದರರಿಗೆ ರಾಖಿ ಇರುವ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ರಕ್ಷಾ ಬಂಧನ ಹಬ್ಬದ ಶುಭಾಶಯ ಕೋರಿದರು. ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿಯರು ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಿದರು.