ಜಿಲ್ಲೆ

ವೈಯಕ್ತಿಕ ಶೌಚಗೃಹ ಕಟ್ಟಿಕೊಳ್ಳಲು ಪ್ರೋತ್ಸಾಹಿಸಿ

ಹೊಸಪೇಟೆ: ಸ್ವಚ್ಛ ಭಾರತ್‌ ಮಿಷನ್ ಗ್ರಾಮೀಣ ಯೋಜನೆಯಡಿ ಮನೆಗೊಂದು ಶೌಚಗೃಹ ಪರಿಕಲ್ಪನೆಯಲ್ಲಿ ಜಿಲ್ಲೆಯ ಪ್ರತಿ ತಾಲೂಕುಗಳ ಪ್ರಗತಿಯನ್ನು ಪರಿಶೀಲಿಸಿ ಜನವರಿ ಮಾಸಾಂತ್ಯದೊಳಗೆ ಸಮೀಕ್ಷೆ ನಡೆಸಿ, ವಾಸ್ತವಾಂಶದ ಮಾಹಿತಿ ಸಂಗ್ರಹಿಸಿ ಜನರಿಗೆ ವೈಯಕ್ತಿಕ ಶೌಚಗೃಹ ಕಟ್ಟಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದು ಗ್ರಾ.ಕು.ನೀ.ನೈ ಇಲಾಖೆಯ  ನಿರ್ದೇಶಕ  ನಾಗೇಂದ್ರ ಪ್ರಸಾದ ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ನಗರದ ಜಿಲ್ಲಾ ಪಂಚಾಯತಿ ಕಾರ್ಯಾಲಯದ ಸಭಾಂಗಣದಲ್ಲಿ ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್‌ ಮಿಷನ್ (ಗ್ರಾ) ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮ ಪಂಚಾಯಿತಿಗಳನ್ನು ದತ್ತು ಪಡೆದು ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪುವಂತೆ ಮಾಡಬೇಕು. ದತ್ತು ಪಡೆದ ಪಂಚಾಯಿತಿಗಳ ಪಟ್ಟಿಯನ್ನು ಕೇಂದ್ರ ಕಚೇರಿಗೆ ಕಳುಹಿಸಬೇಕು. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಪೂರ್ಣಗೊಳಿಸಿ, ಯೋಜನೆಯ ಅನುಷ್ಠಾನದಲ್ಲಿ ರಸ್ತೆ ಪುನರ್‌ ನಿರ್ಮಾಣ ಕಾಮಗಾರಿಗಳನ್ನು ಜರೂರಾಗಿ ಮಾಡಬೇಕು ಎಂದರು.

ಜಲ ಜೀವನ್ ಮಿಷನ್ ಮತ್ತು ಸ್ವಚ್ಚ ಭಾರತ್ ಮಿಷನ್ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕು. 24*7 ನಿರಂತರ ನೀರು ಸರಬರಾಜು ಗ್ರಾಮಗಳನ್ನು ಆಯ್ಕೆಮಾಡಿ ಗ್ರಾಮಗಳನ್ನು ಘೋಷಿಸಿ ಯೋಜನೆಯನ್ನು ಯಶಸ್ವಿಗೊಳಿಸಲು ಎಲ್ಲಾ ಅಧಿಕಾರಿಗಳು  ಸಮನ್ವಯವನ್ನು ಸಾಧಿಸಬೇಕು. ಬಹು ನಿರೀಕ್ಷಿತ ಯೋಜನೆಯಾದ ಪಾವಗಡ ಬಹುಗ್ರಾಮ ಕುಡಿವ ನೀರು ಯೋಜನೆಯನ್ನು ಅನುಷ್ಠಾಗೊಳಿಸುತ್ತಿರುವ ಗುತ್ತಿಗೆದಾರರಿಗೆ ಯೋಜನೆಯ ಕೆಲವೊಂದು ಲೋಪದೋಷಗಳನ್ನು ಸರಿಪಡಿಸಿ ಯೋಜನೆಯನ್ನು ಇಲಾಖೆಗೆ ಹಸ್ತಾಂತರಿಸಬೇಕು ಎಂದರು.

ಗ್ರಾ.ಕು.ನೀ.ನೈ ಇಲಾಖೆಯ ಉಪ ಕಾರ್ಯದರ್ಶಿ ಜಾಫರ್ ಷರೀಪ್ ಸುತಾರಾ, ಉಪ ಕಾರ್ಯದರ್ಶಿ ಅಭಿವೃದ್ಧಿ ಸಿ.ಎಸ್.ಮಹೇಶ್, ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ ಇತರರಿದ್ದರು.