ಜಿಲ್ಲೆ

ಮಾಜಿ ಸಿಎಂ ಎಂ.ಪಿ.ಪ್ರಕಾಶ್ ಕಲಾಮಂದಿರ ಮರು ನಿರ್ಮಿಸಿ

ಮಂಜುನಾಥ

ಹೊಸಪೇಟೆ: ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ ಹೆಸರಿನಲ್ಲಿರುವ ನಗರದ ಕಲಾಮಂದಿರವನ್ನು ಮರು ನಿರ್ಮಿಸಿ, ಕಲಾವಿದರಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಡಬೇಕು ಎಂದು ಕರುನಾಡು ಕಲಿಗಳ ಕ್ರಿಯಾಶೀಲ ಸಮಿತಿ ಪದಾಧಿಕಾರಿಗಳು ನಗರಸಭೆ ಎದುರು ಗುರುವಾರ ಪ್ರತಿಭಟನೆ ನಡೆಸಿ ಪೌರಾಯುಕ್ತ ಚಂದ್ರಪ್ಪ ಹಾಗೂ ಅಧ್ಯಕ್ಷ ರೂಪೇಶ್‌ಕುಮಾರಗೆ ಮನವಿ ಸಲ್ಲಿಸಿದರು.

ಈ ಕಲಾಮಂದಿರದಲ್ಲಿ ನಗರಸಭೆ ಉಪಕರಣಗಳನ್ನು ಇಡಲು ಬಳಕೆ ಮಾಡಲಾಗುತ್ತಿದೆ. ಸಾಕಷ್ಟು ಬಾರಿ ಮನವಿ ಮಾಡಿದರೂ ಇತ್ತ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕ್ಯಾರೇ ಎನ್ನುತ್ತಿಲ್ಲ. ಎಂ.ಪಿ.ಪ್ರಕಾಶ್ ಅವರಿಗೆ ಮಾಡುವ ಅವಮಾನವಾಗಿದೆ. ಶಿಥಿಲಗೊಂಡಿರುವ ಈ ಹಳೆ ಕಟ್ಟಡವನ್ನು ದ್ವಂಸಗೊಳಿಸಿ ನೂತನವಾಗಿ ಭವ್ಯವಾದ ಎಂ.ಪಿ.ಪ್ರಕಾಶ್ ಕಲಾಮಂದಿರವನ್ನು ಈಗ ಇರುವ ಸ್ಥಳದಲ್ಲಿಯೇ ನಿರ್ಮಿಸಬೇಕು. ವಿಜಯನಗರದ ಇತಿಹಾಸವನ್ನು ಮರುಕಳಿಸುವ ವೈಭವವು ಮತ್ತೆ ಕಲಾವಿದರಿಗೆ ದೊರೆಯಬೇಕು. ಬಯಲಾಟ, ನಾಟಕಗಳು, ಜಾನಪದ ಕಲೆಗಳು, ಹಾಗೂ ದೇಶೀಯ ಕಲೆಗಳನ್ನು ಬೆಳೆಸಲು ಈ ಕಲಾಮಂದಿರ ಅತ್ಯಂತ ಅವಶ್ಯವಾಗಿರುತ್ತದೆ ಎಂದರು.

ರಾಷ್ಟ್ರಪತಿಯವರಿAದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿರುವ ಮಾತಾ ಮಂಜಮ್ಮ ಜೋಗತಿಯವರ ವೃತ್ತವನ್ನು ನಿರ್ಮಿಸಬೇಕು. ಇವರ ಹೆಸರಿನಲ್ಲಿ ವೃತ್ತ ನಿರ್ಮಿಸಿದರೆ, ಅದು ಕೇವಲ ಕಲೆಗೆ ಮಾತ್ರವಲ್ಲ, ವಿಜಯನಗರ ಜಿಲ್ಲೆಗೆ ಕೊಟ್ಟ ಕೊಡುಗೆ ಆಗುತ್ತದೆ. ಹಾಗಾಗಿ ಈ ವೃತ್ತವನ್ನು ನಿರ್ಮಿಸಲು ನಗರಸಭೆಯ ಸರ್ವ ಸದಸ್ಯರು ಹಾಗೂ ಅವರ ಅಭಿಪ್ರಾಯ ತಿಳಿಸಲು ಒಂದು ಸಭೆ ಕರೆದು ಠರಾವು ಪಾಸು ಮಾಡಬೇಕು ಎಂದು ಆಗ್ರಹಿಸಿದರು.

ನಗರಸಭೆ ಉಪಾಧ್ಯಕ್ಷ ರಮೇಶ ಗುಪ್ತಾ, ಸದಸ್ಯ ಜೀವರತ್ನಂ, ಮುಖಂಡರಾದ ಪಿ. ವೆಂಕಟೇಶ, ಬೋಡ ರಾಮಪ್ಪ ಗುಜ್ಜಲ ಗಣೇಶ, ದಾದಾ ಖಲಂದರ್, ಹೊನ್ನೂರಪ್ಪ ಇತರರಿದ್ದರು.