ಹೊಸಪೇಟೆಯಲ್ಲಿ ಬುಧವಾರ ಡಿಎಆರ್ ಕಟ್ಟಡಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಚಾಲನೆ ನೀಡಿದರು. 
ಜಿಲ್ಲೆ

ವಿಜಯನಗರದ ಗತ ವೈಭವ ಮತ್ತೆ ಮರಳಿಸೋಣ

ಹೊಸಪೇಟೆ: ಇಲ್ಲಿ ಮಹಿಳಾ ಠಾಣೆ, ಸೆನ್ ಠಾಣೆ ಮತ್ತು ಸಂಚಾರ ಠಾಣೆ ಮಂಜೂರು ಮಾಡುವೆ. ಸಿಬ್ಬಂದಿ ಕೊರತೆ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದಲ್ಲಿ ಬುಧವಾರ ಡಿಎಆರ್ ಕಟ್ಟಡ, ಕವಾಯತು ಮೈದಾನ ಉದ್ಘಾಟನೆ ಮತ್ತು ಪೊಲೀಸ್ ವಸತಿ ಗೃಹಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ವಿಜಯನಗರ ಜಿಲ್ಲೆ ಐತಿಹಾಸಿಕ ಜಿಲ್ಲೆಯಾಗಿದೆ. ವಿಜಯನಗರ ಸಾಮ್ರಾಜ್ಯದ ಗತ ವೈಭವ ಮತ್ತೆ ಮರಳಿಸೋಣ, ಪೊಲೀಸರಿಗೂ ಉತ್ತಮ ವಸತಿ ವ್ಯವಸ್ಥೆ ಕಲ್ಪಿಸೋಣ. ರಾಜ್ಯದ ಎಲ್ಲಾ ಪೊಲೀಸರಿಗೂ ವಸತಿ ವ್ಯವಸ್ಥೆ ಕಲ್ಪಿಸಲು ನಾವು ಕ್ರಮ ಕೈಗೊಂಡಿದ್ದೇವೆ. ಈಗಾಗಲೇ ಕೇಂದ್ರ ಗೃಹ ಸಚಿವರಿಗೂ ಭೇಟಿ ಮಾಡಿರುವೆ. ಒಂದು ವೇಳೆ ಅವರು ನೀಡದಿದ್ದರೆ, ನಮ್ಮ ಅನುದಾನದಲ್ಲೇ ನಿರ್ಮಾಣ ಮಾಡುತ್ತೇವೆ. ಕಲ್ಯಾಣ ಕರ್ನಾಟಕದಲ್ಲಿ ಕೆಕೆಆರ್ ಡಿಬಿಯ 500 ಕೋಟಿ ರು. ಅನುದಾನದಲ್ಲಿ ಪೊಲೀಸರಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದರು.

ದೇಶದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ, ಉತ್ತಮ ಇಲಾಖೆ ಆಗಿದೆ. ಈಗ ವಿರೋಧ ಪಕ್ಷದವರು ಯಾವುದೇ ಪ್ರಕರಣ ಇರಲಿ, ಸಿಬಿಐಗೆ ಕೊಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಆಗ ಅವರಿಗೆ ಸಿಬಿಐ ಚೋರ್ ಬಚಾವೋ ಸಂಸ್ಥೆಯಾಗಿದೆ. ನಮ್ಮ ಸಿಒಡಿ ಪೊಲೀಸರು ಉತ್ತಮ ಪೊಲೀಸರು ಆಗಿದ್ದಾರೆ. ಆದರೆ ಇವರಿಗೆ ಈಗ ಸಿಒಡಿ ಮೇಲೂ ನಂಬಿಕೆ ಇಲ್ಲ. ವಿರೋಧ ಪಕ್ಷದವರು ಏನೇ ಹೇಳಲಿ, ಕರ್ನಾಟಕ ಪೊಲೀಸ್ ಉತ್ತಮ ಪೊಲೀಸರು ಆಗಿದ್ದಾರೆ ಎಂದರು.

ಶಾಸಕರಾದ ಎಚ್.ಆರ್. ಗವಿಯಪ್ಪ, ಪ್ರಸಾದ್ ಅಬ್ಬಯ್ಯ, ಎಂ.ಪಿ.ಲತಾ, ಎಡಿಜಿಪಿ ಆರ್.ಹಿತೇಂದ್ರ, ಐಜಿಪಿ ಬಿ.ಲೋಕೇಶ ಕುಮಾರ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಪಂ ಸಿಇಒ ನೋಂಗ್ಜಯ್ ಮೊಹಮ್ಮದ್ ಅಲಿ ಅಕ್ರಂ ಶಾ, ಎಸ್ಪಿ ಶ್ರೀಹರಿಬಾಬು, ಎಎಸ್ಪಿ ಸಲೀಂ ಪಾಷಾ, ಹುಡಾ ಅಧ್ಯಕ್ಷ ಎಚ್‌ಎನ್‌ಎಫ್ ಇಮಾಮ್ ನಿಯಾಜಿ ಮತ್ತಿತರರಿದ್ದರು.

ರಾಜ್ಯದ ಪೊಲೀಸರಿಗೆ ಐದು ಸಾವಿರ ಮನೆಗಳ ನಿರ್ಮಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ 1500 ಕೋಟಿ ರೂ. ಅನುದಾನ ನೀಡಲು ಕೋರಿರುವೆ. ಇನ್ನೂ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಪೊಲೀಸರಿಗೆ ಮನೆಗಳ ನಿರ್ಮಾಣಕ್ಕಾಗಿ ಕೆಕೆಆರ್‌ಡಿಬಿ ಅನುದಾನ ಬಳಕೆಗೆ ಕ್ರಮವಹಿಸಲಾಗುವುದು - ಡಾ.ಜಿ.ಪರಮೇಶ್ವರ, ಗೃಹ ಸಚಿವ