ಹೊಸಪೇಟೆ ಸಶಸ್ತ್ರ ಮೀಸಲುಪಡೆ ಆವರಣದಲ್ಲಿ ಸೋಮವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಪುಷ್ಪ ನಮನ ಸಲ್ಲಿಸಿದರು. ಎಸ್ಪಿ ಎಸ್.ಜಾಹ್ನವಿ, ಎಎಸ್ಪಿ ಟಿ.ಮಂಜುನಾಥ ಇತರರಿದ್ದರು. 
ಜಿಲ್ಲೆ

ದೇಶದ ರಕ್ಷಣೆಯಲ್ಲಿ ಪೊಲೀಸರ ಸೇವೆ ಅನನ್ಯ

ಮಂಜುನಾಥ

ಹೊಸಪೇಟೆ: ನಮ್ಮ ದೇಶದ ರಕ್ಷಣೆಯಲ್ಲಿ ಸೈನಿಕರ ಮತ್ತು ಪೊಲೀಸರ ಸೇವೆ ಅವಿಸ್ಮರಣಿಯವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಹೇಳಿದರು.

ನಗರದ ಸಶಸ್ತ್ರ ಮೀಸಲುಪಡೆ ಆವರಣದಲ್ಲಿ ಸೋಮವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೊಲೀಸರು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಪ್ರತಿಯೊಬ್ಬ ನಾಗರೀಕರನ್ನು ರಕ್ಷಸಿಸಲು ಅಪಾರ ಕೊಡುಗೆಯನ್ನು ನೀಡಿದ್ದಾರೆ ನಮ್ಮ ದೇಶದ ಶಾಂತಿ ಮತ್ತು ಸುರಕ್ಷಿತೆ ಕಾಯ್ದಿಕೊಳ್ಳಲು ತ್ಯಾಗ ಮಾಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅವರ ಧೈರ್ಯ,ಶೌರ್ಯ ಮತ್ತು ಸಮರ್ಪಣೆ ಮನೋಭಾವಕ್ಕೆ ಯಾವತ್ತು ಋಣಿಯಾಗಿರಬೇಕು. ಪ್ರವಾಹ, ಭಯೋತ್ಪಾದನೆಯಂತಹ ಹಲವಾರು ಆಪತ್ತಿನಿಂದ ತಮ್ಮ ಜೀವನದ ಹಂಗು ತೊರೆದು ನಮ್ಮನ್ನು ರಕ್ಷಿಸುತ್ತಾರೆ. ಪೊಲೀಸರ ಸೇವೆ ಬಹಳ ಮಹತ್ವದ್ದಾಗಿದೆ. ಕಾನೂನು ಜಾರಿ ಇಲಾಖೆಯನ್ನು ಬಲಪಡಿಸಲು ಮತ್ತು ಪೊಲೀಸ್ ಅಧಿಕಾರಿ ಕಲ್ಯಾಣಕ್ಕಾಗಿ ಹೆಚ್ಚಿನ ಶ್ರಮ ವಹಿಸಬೇಕಾಗಿರುತ್ತದೆ. ಪೊಲೀಸರು ಮಾಡುವ ಸಮಾಜದ ರಕ್ಷಣೆಯ ಕಾರ್ಯಕ್ಕೆ ಪ್ರತಿಯೊಬ್ಬರು ಸಹ ಬೆಂಬಲಿಸಬೇಕು. ಹುತಾತ್ಮರ ತ್ಯಾಗವನ್ನು ಸ್ಮರಿಸುವುದು ಅಷ್ಟೇ ಅಲ್ಲ ಅವರ ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಕರ್ತವ್ಯವಾಗಿರುತ್ತದೆ ಎಂದರು.

ಎಸ್ಪಿ ಎಸ್.ಜಾಹ್ನವಿ ಮಾತನಾಡಿ, ರಾಷ್ಟ್ರದಾದ್ಯಂತ ಪೊಲೀಸ್ ಹುತಾತ್ಮರ ದಿನ ಆಚರಿಸುತ್ತಿದ್ದು, ಈ ಮೂಲಕ ಹುತಾತ್ಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗೌರವ ಸಲ್ಲಿಸಲಾಗುತ್ತದೆ. 1959ರ ಅ.21 ಸಿಆರ್‌ಪಿಎಫ್ ಪಡೆಯ ನೇತೃತ್ವವಹಿಸಿದ್ದ ಕರಣ್‌ಸಿಂಗ್ ಅವರು ಭಾರತದಲ್ಲಿ ಅತಿಕ್ರಮಣ ಮಾಡಿದ ಚೀನಾ ದೇಶದ ಸೈನಿಕರು ಮತ್ತು ಭಾರತೀಯ ಸಿಆರ್‌ಪಿಎಫ್ ಪೊಲೀಸರ ಮಧ್ಯೆ ನಡೆದ ಘರ್ಷಣೆಯಲ್ಲಿ ಭಾರತೀಯ ಹತ್ತು ಪೊಲೀಸ್‌ರು ಹುತಾತ್ಮರಾದರು. 9 ಮಂದಿಯನ್ನು ಚೈನಾ ದೇಶದ ಸೈನಿಕರು, ಸೆರೆ ಹಿಡಿದುಕೊಳ್ಳುತ್ತಾರೆ. ಅದರ ಸ್ಮರಣಾರ್ಥವಾಗಿ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸುತ್ತಾ ಬರಲಾಗುತ್ತಿದೆ. ಕರ್ತವ್ಯ ಪಾಲನೆಯಲ್ಲಿ ಪೊಲೀಸ್ ಪಡೆಗಳು ತಮ್ಮ ಜೀವನವನ್ನು ಮುಡಿಪಾಗಿಟ್ಟು ಹೋರಾಡಿದ ಹುತಾತ್ಮರನ್ನು ಇಂದು ನಾವು ಸ್ಮರಿಸಬೇಕಾಗಿದೆ ಎಂದರು. ಎಎಸ್ಪಿ ಟಿ.ಮಂಜುನಾಥ ಇತರರಿದ್ದರು.