ಜಿಲ್ಲೆ

ಪೊಲೀಸರ ದಾಳಿ ಗಾಂಜಾ ವಶಕ್ಕೆ

ಹೊಸಪೇಟೆ: ನಗರ ಸೇರಿದಂತೆ ವಿವಿಧ ಕಡೆ ಅಕ್ರಮ ಗಾಂಜಾ ಮಾರಾಟ ಮಾಡುತ್ತಿರುವರ ಮೇಲೆ ಬುಧವಾರ ಪೊಲೀಸರು ದಾಳಿ ಮಾಡಿ, 69,150 ಮೌಲ್ಯದ 1,073 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ವಿವಿಧ ಠಾಣೆಗಳಲ್ಲಿ ಐದು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.

ತಾಲೂಕಿನ ಗಾಳೆಮ್ಮನ ಗುಡಿ ಸಮೀಪದ ಎಲ್‌ಎಲ್‌ಸಿ ಕಾಲುವೆ ಪಕ್ಕದಲ್ಲಿ ವ್ಯಕ್ತಿಯೊಬ್ಬ ಗಾಂಜಾ ಮಾರಾಟ ಮತ್ತು ಸಾಗಾಣಿಕೆ ಮಾಡುತ್ತಿರುವ ಕುರಿತು ಮಾಹಿತಿ ಮೇರೆಗೆ ಹಂಪಿ ಪೊಲೀಸ್ ಠಾಣೆಯ ಪಿಎಸ್‌ಐ ಶಿವಕುಮಾರನಾಯ್ಕ ನೇತೃತ್ವದಲ್ಲಿ ದಾಳಿ ಕಾರ್ಯಚರಣೆ ನಡೆಸಿ, ಕಡ್ಡಿರಾಂಪುರ ಕ್ರಾಸ್‌ನಲ್ಲಿ ವ್ಯಕ್ತಿಯೊಬ್ಬರಿಂದ 15,500 ರೂ. ಮೌಲ್ಯದ 160 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಹಾಗೂ 12 ಸಾವಿರ ಮೌಲ್ಯದ 120 ಗ್ರಾಂ ಗಾಂಜಾ ಹಾಗೂ 200 ರೂ., ನಗದು ಹಾಗೂ ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ 2 ಪ್ರಕರಣಗಳನ್ನು ದಾಖಲಿಸಿದ್ದಾರೆ. ನಗರದ ಜಂಬುನಾಥ ರಸ್ತೆಯಲ್ಲಿ ದಾಳಿ ನಡೆಸಿದ ಗ್ರಾಮೀಣ ಪೊಲೀಸರು 21,650 ಮೌಲ್ಯದ 433 ಗ್ರಾಂ ಗಾಂಜಾ ಮತ್ತು ಆರೋಪಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಇಲ್ಲಿನ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಹಂಪಿ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು, 10 ಸಾವಿರ ರೂ. ಮೌಲ್ಯದ 160 ಗ್ರಾಂ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. ಇನ್ನೂ ತಾಲೂಕಿನ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐತಿಹಾಸಿಕ ಕೆರೆ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯಿಂದ 10 ಸಾವಿರ ಮೌಲ್ಯದ 200 ಗ್ರಾಂ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.