ಹೊಸಪೇಟೆ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರು ಸಹ ಕುಡಿವ ನೀರು ಪೂರೈಕೆ, ನೈರ್ಮಲ್ಯದಂತಹ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಜಿ.ಪಂ. ಸಿಇಒ ಸದಾಶಿವ ಬಿ.ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯ ಗ್ರಾ.ಪಂ. ಹಂತದ ವಿವಿಧ ಯೋಜನೆಯ ಪ್ರಗತಿ ಪರಿಶೀಲಾ ಸಭೆ ಗುರುವಾರ ನಡೆಯಿತು.
ಬಯಲು ಬಹಿರ್ದೆಸೆ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆ ಏರ್ಪಡಿಸಿ ಶೌಚಾಲಯ ಇಲ್ಲದ ಮನೆಗಳನ್ನು ಗುರುತಿಸಿ ಸ್ಥಳದಲ್ಲಿಯೇ ಸಿಟಿಜನ್ ಪೋರ್ಟಲ್‌ನಲ್ಲಿ ಅರ್ಜಿ ದಾಖಲಿಸಿ. ಪ್ರತಿವಾರ ತಾಲೂಕುವಾರು ವಿಡಿಯೋ ಸಂವಾದ ನಡೆಸಲಾಗುವುದು. ಒಂದು ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪ್ರಗತಿ ಸಾಧಿಸಲು ವಿಫಲರಾದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಮಂಜೂರಾದ ಮನೆಗಳ ನಿರ್ಮಾಣದ ಸಂಪೂರ್ಣ ವರದಿ ನೀಡಬೇಕು. ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಒತ್ತಡಕ್ಕೆ ಒಳಗಾಗಿ ಫಲಾನುಭವಿಗಳ ಆಯ್ಕೆಯಲ್ಲಿ ನಿಯಮ ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.