ಜಿಲ್ಲೆ

ಪಾರದರ್ಶಕ ಪರೀಕ್ಷೆ ನಡೆಸಿ

ಮಂಜುನಾಥ

ಹೊಸಪೇಟೆ: ಕರ್ನಾಟಕ ಲೋಕಸೇವಾ ಆಯೋಗದಿಂದ ಉಳಿಕೆ ಮೂಲವೃಂದದ ಪಿಡಿಓ 150 ಹುದ್ದೆಗಳ ಆಯ್ಕೆಗೆ ಡಿ.07 ಮತ್ತು 08 ರಂದು ನಡೆಯುವ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸಿ ಯಾವುದೇ ಅವ್ಯವಹಾರಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಉಳಿಕೆ ಮೂಲ ವೃಂದದ ಪಿಡಿಓ ಹುದ್ದೆ ನೇಮಕಾತಿ ಪರೀಕ್ಷೆಯ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿದರು.

ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ಸೂಕ್ಷ್ಮ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಕಡ್ಡಾಯ ಕನ್ನಡ ಪರೀಕ್ಷೆಯು ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ನಗರದಲ್ಲಿ 11 ಕೇಂದ್ರಗಳು, ಹಗರಿಬೊಮ್ಮನಹಳ್ಳಿಯಲ್ಲಿ 5 ಹಾಗೂ ಕೂಡ್ಲಿಗಿಯಲ್ಲಿ 3 ಒಟ್ಟು 19 ಕೇಂದ್ರಗಳಿವೆ. 8,283 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮತ್ತು ಡಿ.08 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಪತ್ರಿಕೆ ಬೆಳಿಗ್ಗೆ 10 ರಿಂದ 11.30 ರವರೆಗೆ ಮತ್ತು ಎರಡನೇ ಪತ್ರಿಕೆ ಮಧ್ಯಾಹ್ನ 2 ರಿಂದ 4 ಗಂಟೆಯ ವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 12,036 ಅಭ್ಯರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.

ಪ್ರತಿ 4 ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ ಒಟ್ಟು 9 ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ. ಮೂಲಭೂತ ಸೌಕರ್ಯಗಳನು ಒದಗಿಸಬೇಕು. ಅಹಿತಕರ ಘಟನೆಗಳು ಸಂಭವಿಸಿದರೆ ಅಂತಹ ವಿವರಗಳ ವರದಿಯನ್ನು ಪರೀಕ್ಷಾ ಕೇಂದ್ರದ ಲಾಗಿನ್ ಮೂಲಕ ಅಪ್ ಲೋಡ್ ಮಾಡಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಮಾತನಾಡಿ, ಅಧಿಕಾರಿಗಳು, ನೌಕರರು ಹಾಗೂ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ. ಅಭ್ಯರ್ಥಿಗಳನ್ನು ಎಲ್ಲ ಹಂತದಲ್ಲಿ ಸಂಪೂರ್ಣವಾಗಿ ಪರಿಶೀಲಿಸಬೇಕು. ನಾವು ಮಾಡುವ ಸಣ್ಣ ತಪ್ಪುಗಳು ಅಭ್ಯರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದರು.

ಎಎಸ್ಪಿ ಸಲೀಂ ಪಾಷ, ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ, ಮುಖ್ಯ ಯೋಜನಾಧಿಕಾರಿ ಅನ್ನದಾನ ಸ್ವಾಮಿ, ತಹಸೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ್ರ ಇತರರಿದ್ದರು.