ಹೊಸಪೇಟೆ: ಇಲ್ಲಿನ ನಗರಸಭೆಯ 2025-26ನೇ ಸಾಲಿನ 77.52 ಕೋಟಿ ರೂ. ವೆಚ್ಚದ ಮುಂಗಡ ಪತ್ರವನ್ನು ಅಧ್ಯಕ್ಷ ರೂಪೇಶ್ ಕುಮಾರ ಗುರುವಾರ ಮಂಡಿಸಿದರು.
ಒಟ್ಟು 77.52 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಲಾಗಿದ್ದು, ಆಯವ್ಯಯ ಮಂಡನೆಯಲ್ಲಿ ವಿವಿಧ ಪಾವತಿಯ ಹೊರತಾಗಿ 10.81 ಲಕ್ಷ ರೂ. ಉಳಿತಾಯವಾಗಲಿದೆ. ನಗರಸಭೆ ನಿಧಿಯಿಂದ 28.45 ಕೋಟಿ ರೂ., 40.97 ಕೋಟಿ. ರೂ. ಒಟ್ಟು ಅನುದಾನ, 8.10 ಕೋಟಿ ರೂ. ಅಸಮಾನ್ಯ ಆದಾಯವಿದ್ದು, ವೇತನ ಸೇರಿದಂತೆ ನಗರಸಭೆಯ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಕಾಮಗಾರಿಗಳನ್ನು ಹಾಕಿಕೊಳ್ಳಲಾಗಿದೆ.
ಕೇಂದ್ರ ಸರ್ಕಾರದ 15 ಹಣಕಾಸಿಲ್ಲಿ 12.36 ಕೋಟಿ ರಾಜ್ಯ ಸರ್ಕಾರದಿಂದ ಅನುದಾನ ಹಂಚಿಕೆಯಾಗಿದ್ದು ನೀರು ಸರಬರಾಜು ಸಂಬಂಧಿತ ಕಾಮಗಾರಿಗಳಿಗಾಗಿ 3.70 ಕೋಟಿ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆ 3.70 ಕೊಳಗೇರಿ ಅಭಿವೃದ್ಧಿ ರಸ್ತೆಗಳು, ಮಳೆ ನೀರು ಚರಂಡಿ ಕಾಮಗಾರಿಗಳು, ಸ್ಮಶಾನಗಳ ಅಭಿವೃದ್ಧಿ ಹಾಗೂ ಬೀದಿ ದೀಪಗಳ ವ್ಯವಸ್ಥೆ ಸೇರಿದಂತೆ 4.96ಕೋಟಿ, ಒಟ್ಟಾರೆ 12.36 ಕೋಟಿ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಕಾಮಗಾರಿ ಕೈಗೊಂಡು ನಗರದ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಲಾಗುವುದು.
ನಗರದ ಪ್ರಮುಖ 10 ಸ್ಥಳಗಳಲ್ಲಿ ಮಾದರಿ ಸುಲಭ ಶೌಚಾಲಯ ನಿರ್ಮಾಣ, ಪೌರಕಾರ್ಮಿಕರ ಆರೋಗ್ಯ ವಿಶ್ರಾಂತಿಗಾಗಿ ನಗರಸಭೆ ಹತ್ತಿರ ವಿಶ್ರಾಂತಿ ಗೃಹ ನಿರ್ಮಾಣಕ್ಕಾಗಿ ಕ್ರಮ ವಹಿಸಲಾಗುವುದು. ಡಿಎಂಎಫ್ ಅನುದಾನದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನೀರು ಸಂಸ್ಕರಣಾ ಘಟಕ ಕಾಮಗಾರಿ ಕೈಗೊಳ್ಳಲಾಗಿದೆ. 240 ನಿವೇಶನಗಳು ಪೌರಕಾರ್ಮಿಕ ಗೃಹಗಳ ನಿರ್ಮಾಣಕ್ಕಾಗಿ ಕ್ರಮ, ಜನರಿಗೆ ತ್ವರಿತ ಸೇವೆ ನೀಡಲು ನಗರಸಭೆಯ ಸೇವೆಗಳನ್ನು ಕರ್ನಾಟಕ ಒನ್ ಸೆಂಟರ್‌ಗೆ ಜೋಡಿಸಲಾಗುವುದು. ನಗರ ಪ್ರಮುಖ ರಸ್ತೆಗಳನ್ನು ಸ್ವಚ್ಛವಾಗಿಡಲು 80 ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ಗುರಿಯನ್ನು ಹಮ್ಮಿಕೊಳ್ಳಲಾಗಿದೆ.
ಕುಡಿವ ನೀರು ಪೂರೈಕೆಗೆ ಖಾಸಗಿಯವರಿಗೆ ಅವಕಾಶ ಕೊಡಬೇಕು. ಇದರಲ್ಲಿ ರಾಜಕೀಯ ರಾಜಕೀಯ ಬೇಡ, ಜನರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಿ ಎಂದು ತಾರಿಹಳ್ಳಿ ಜಂಬುನಾಥ ಹೇಳಿದಾಗ, ಖಾಸಗಿವರು ನಗರಸಭೆಯಲ್ಲಿ ನೋಂದಣಿ ಮಾಡಿ ನೀರು ಕೊಡಬಹುದು ಎಂದು ಅಧ್ಯಕ್ಷ ರೂಪೇಶ್ ಉತ್ತರಿಸಿದರು. ಈ ವೇಳೆ ಪೌರಾಯುಕ್ತ ಮನೋಹರ್, ಖಾಸಗಿಯವರು ತಮ್ಮ ಫೋಟೊ ಹಾಕಿಕೊಂಡು ಕೊಡಲು ಅವಕಾಶವಿಲ್ಲ. ವ್ಯಕ್ತಿ ಆಧಾರಿತ ನೀರು ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ. ನಗರಸಭೆ ಸಶಕ್ತವಾಗಿದೆ. ಖಾಸಗಿಯವರು ಬೇಕಿದ್ದರೆ ಅದೇ ಹಣವನ್ನು ನಗರಸಭೆಗೆ ಕೊಡಬಹುದು. ಆರ್ಥಿಕವಾಗಿ ಗಟ್ಟಿಯಾಗಿದಿವಿ. ಎಲ್ಲಿ ಬೇಕಾದಲ್ಲಿ ಅಗತ್ಯವಿರುವಕಡೆ ಟ್ಯಾಂಕರ್ ಪೂರೈಸಲಾಗುವುದು ಎಂದರು.
ಖಾಸಗಿ ಸೈಟ್ ಮಾಲಿಕರು ನಿವೇಶನಗಳನನು ಸ್ವಚ್ಛತೆ ಮಾಡಿಮೊಂಡರೆ ಸರಿ, ಇಲ್ಲದಿದ್ದರೆ ನಾವೇ ಕ್ಲೀನ್ ಮಾಡಿಕೊಂಡು 10 ಸಾವಿರ ರೂ. ಆಸ್ತಿ ತೆರಿಗೆಯಲ್ಲಿ ಸೇರಿಸಿ ಸಂಗ್ರಹಿಸಲು ಸದಸ್ಯರು ಸಮ್ಮತಿಸಿದರು. ರಂಜಾನ್ ಹಾಗೂ ಯುಗಾದಿ ಹಬ್ಬಕ್ಕೆ ಸಂಬಂಧಿಸಿದಂತೆ ಸ್ವಚ್ಛತೆ, ಕುಡಿವ ನೀರು ಸಮಸ್ಯೆ ಆಗದಂತೆ ಕ್ರಮವಹಿಸಬೇಕು.
ಫಾಗಿಂಗ್ ಒಂದು ವಾರ್ಡ್ ಕೇವಲ ಒಂದೇ ಓಣಿಗೆ ಹೊಡೆದು ಹೋಗುತ್ತಾರೆ. ಕೇಳಿದರೆ, ಫಾಗಿಂಗ್ ಸಿಬ್ಬಂದಿಗಳು ಮಾಹಿತಿ ಇಲ್ಲ ಅಂತಾರೆ ಎಂದು ಸದಸ್ಯರು ಹೇಳಿದರು. ಆಗ ಪೌರಾಯುಕ್ತರು, 35 ವಾರ್ಡ್ ಗಳಿಗೆ ತೆರಳಿ ಫಾಗಿಂಗ್ ಮಾಡಿ. ಬೇಕಾಬಿಟ್ಟಿ ಆಗುತ್ತಿರುವುದು ಗಮನಕ್ಕೆ ಬಂದಿದೆ. ವಾರ್ಡ್ ಸದಸ್ಯರು, ಸಾರ್ವಜನಿಕರ ಸಹಿ ಪಡೆದು ಹದಿನೈದು ದಿನದಲ್ಲಿ ವರದಿ ಕೊಡಬೇಕು ಎಂದು ಸೂಚಿಸಿದರು.
ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಅನುದಾನ ತರುವ ಮೂಲಕ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು. ನಗರಸಭೆ ಬಜೆಟ್ ಮಂಡನಾ ಸಭೆಯಲ್ಲಿ ಉಪಸ್ಥಿತರಿದ್ದ ಅವರು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಾರ್ಡ್ ವಾರು ಓಡಾಡಿ ಕೆಲಸ ಮಾಡುವೆ. ಒಳ್ಳೆಯ ಬಜೆಟ್ ಮಂಡನೆಯಾಗಿದೆ. ಇಡೀ ರಾಜ್ಯದಲ್ಲಿ ಟ್ರಿಟ್ ಮೆಂಟ್ ಪ್ಲಾಂಟ್ ಬಗ್ಗೆ ಯಾರೂ ಗಮನ ಕೊಡುತ್ತಿಲ್ಲ. ನಮ್ಮಲ್ಲಿ ಉತ್ತಮ ವ್ಯವಸ್ಥೆಯಾಗಿದೆ. ಇದು ದೊಡ್ಡ ಕೊಡುಗೆ. ತೆರಿಗೆ ಸಂಗ್ರಹ ಹೆಚ್ಚಾದರೆ ಅಭಿವೃದ್ಧಿಗೆ ಅನುಕೂಲವಾಗಲಿದೆ. 25 ಕೋಟಿ ಸಂಗ್ರಹಿಸಬೇಕು ಎಂದರು.