ಹೊಸಪೇಟೆಯಲ್ಲಿ ನಗರಸಭೆ ವಾರ್ಡ್ ಸದಸ್ಯರು ಪೌರಾಯುಕ್ತ ಸಿ.ಚಂದ್ರಪ್ಪ ಜತೆ ವಾಗ್ವಾದನ ನಡೆಸುತ್ತಿರುವುದು 
ಜಿಲ್ಲೆ

ಮುಗಿಯದ ಕುಡಿವ ನೀರಿನ ಹೈಡ್ರಾಮ

ಮಂಜುನಾಥ

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಖಾಸಗಿ ಟ್ಯಾಂಕರ್‌ಗಳಿಗೆ ಕುಡಿವ ನೀರು ಪೂರೈಕೆ ವಿಚಾರ ಶಾಸಕ ಎಚ್.ಆರ್.ಗವಿಯಪ್ಪ ಹಾಗೂ ಮಾಜಿ ಸಚಿವ ಆನಂದ ಸಿಂಗ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ರಾಜಕೀಯ ಕೆಸರೆರಚಾಟ ಮುಂದುವರಿದಿದೆ.

ಜಲ ಸಮಸ್ಯೆ ಇರುವ ವಾರ್ಡ್‌ಗಳಿಗೆ ಖಾಸಗಿ ಟ್ಯಾಂಕರ್‌ ಮೂಲಕ ಕುಡಿವ ನೀರು ಸರಬರಾಜಿಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಠರಾವು ಹೊರಡಿಸಲಾಗಿದೆ. ಆದರೂ ಪೌರಾಯುಕ್ತ ಸಿ.ಚಂದ್ರಪ್ಪ ತಡೆಹಿಡಿದಿದ್ದು, ಹಾಲಿ ಹಾಗೂ ಮಾಜಿ ಶಾಸಕರ ಹೈಡ್ರಾಮಾ ಮುಂದುವರೆದಿದೆ. ಭಾನುವಾರ ನಗರದ ಕೆಲ ವಾರ್ಡ್‌ಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದ್ದಕ್ಕೆ ಮಾಜಿ ಸಚಿವ ಆನಂದ ಸಿಂಗ್ ಅವರು ಟ್ಯಾಂಕರ್ ಮೂಲಕ ನಗರಸಭೆಯ ಚಿತ್ತವಾಡಿ ಕುಡಿವ ನೀರಿನ ಘಟಕದಿಂದ ನೀರು ಪಡೆದು ಪೂರೈಕೆಗೆ ಮುಂದಾಗಿದ್ದರು. ಆದರೆ, ಪೌರಾಯುಕ್ತ ತಡೆದಿದ್ದರು. ಇದನ್ನು ಖಂಡಿಸಿ ಆನಂದ ಸಿಂಗ್ ನೇತೃತ್ವದಲ್ಲಿ ನಗರಸಭೆ ಸದಸ್ಯರು ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದರು. ಸೋಮವಾರ ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡಲು ಸದಸ್ಯರ ತುರ್ತು ಸಭೆ ಕರೆದು ಠರಾವು ಪಾಸ್ ಮಾಡಲಾಗಿತ್ತು. ಸೋಮವಾರ ಸಂಜೆ ಹಾಗೂ ಮಂಗಳವಾರ ಆನಂದ ಸಿಂಗ್ ಅವರ ಎರಡು ಟ್ಯಾಂಕರ್‌ಗಳಿಗೆ ನೀರು ಬಿಡಲಾಗಿದೆ. ಬುಧವಾರ ಪೌರಾಯುಕ್ತ ಚಂದ್ರಪ್ಪ ಅವರು ಜಿಲ್ಲಾಧಿಕಾರಿ ಅನುಮೋದನೆ ನೀಡುವವರೆಗೆ ನೀರು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ಹೈಡ್ರಾಮಾ ಮುಂದುವರಿದಿದೆ. ಟ್ಯಾಂಕರ್‌ಗಳಿಗೆ ನೀರು ಬಿಡುವುದರಿಂದ ಯಾರಿಗೆ ಲಾಭ, ನಷ್ಟ ಎಂಬ ಚರ್ಚೆ ಶುರುವಾಗಿದೆ.

ನಗರದ ಬಹುತೇಕ ವಾರ್ಡ್‌ಗಳಿಗೆ ಕುಡಿವ ನೀರು ಪೂರೈಕೆಯಾಗುತ್ತಿದೆ. 35 ವಾರ್ಡ್‌ಗಳ ಪೈಕಿ ಐದರಲ್ಲಿ ಜಲ ಸಮಸ್ಯೆ ಇದೆ. ಈ ಪೈಕಿ ಮೂರು ವಾರ್ಡ್‌ಗಳಿಗೆ ಪ್ರತಿದಿನ ಟ್ಯಾಂಕರ್ ನೀರೇ ಒದಗಿಸಬೇಕು. ಆದರೆ ಖಾಸಗಿ ಟ್ಯಾಂಕ‌ರ್ ಗಳಿಗೆ ಯಾಕೆ ನೀರು ಕೊಡಬೇಕು.? ಮುಂದಿನ ದಿನಗಳಲ್ಲಿ ಕೆಎಂಇಆರ್‌ಸಿಯಿಂದ 300 ಕೋಟಿ ರೂ. ವೆಚ್ಚದಲ್ಲಿ ಡಿಪಿಆ‌ರ್ ಸರ್ವೇ ನಡೆಯುತ್ತಿದೆ. ಡಿಎಂಎಫ್ ಹಾಗೂ ಡಿಎಂಆರ್ ಸಿಯಡಿ ತಲಾ 10 ಕೋಟಿ ರೂ. ಅನುದಾನದಲ್ಲಿ ನೀರಿನ ಯೋಜನೆ ರೂಪಿಸಲಾಗಿದೆ. ನಗರೋತ್ಥಾನ ಯೋಜನೆಯಲ್ಲಿ 10 ಲಕ್ಷ ಲೀಟರ್‌ನ ನಾಲ್ಕು ಓವರ್ ಹೆಡ್ ಟ್ಯಾಂಕರ್ ನಿರ್ಮಾಣಕ್ಕೆ ಟೆಂಡ‌ರ್ ಕರೆಯಲಾಗಿದೆ. 15ನೇ ಹಣಕಾಸಿನಲ್ಲಿ 5 ಲಕ್ಷ ಲೀ. ಓವರ್ ಹೆಡ್ ಟ್ಯಾಂಕರ್ ಕಾಮಗಾರಿ ಪ್ರಗತಿಯಲ್ಲಿದೆ. ಆದಷ್ಟು ಬೇಗ ಜಲ ಬವಣೆ ನಿವಾರಿಸಲಾಗುವುದು ಎನ್ನುತ್ತಾರೆ ಪೌರಾಯುಕ್ತ ಸಿ.ಚಂದ್ರಪ್ಪ.

ವ್ಯಕ್ತವಾಗುತ್ತಿದೆ ಆಕ್ರೋಶ

ಮಾಜಿ ಸಚಿವ ಆನಂದ್ ಸಿಂಗ್ 2004ರಿಂದ ನಗರದಲ್ಲಿ ನೀರಿನ ಸಮಸ್ಯೆ ಇದಕಡೆ ಟ್ಯಾಂಕರ್ ಪೂರೈಸುತ್ತಿದ್ದಾರೆ. ಹಿಂದೆ ಎಚ್.ಆರ್.ಗವಿಯಪ್ಪ ಟ್ಯಾಂಕರ್ ಚಿತ್ತವಾಡ್ಲಿ ನೀರಿನ ಘಟಕದಿಂದ ನೀರು ಪಡೆದು ಪೂರೈಸಿದ್ದಾರೆ. ಅಂದು ಇಲ್ಲದ ಸಮಸ್ಯೆ ಈಗೇಕೆ? ಎಂದು ನಗರಸಭೆ ಸದಸ್ಯರ ಪ್ರಶ್ನೆ. ನಗರದಲ್ಲಿ ಜಲ ಸಮಸ್ಯೆ ಇದ್ದ ಕಾರಣ ನಗರಸಭೆ ಟ್ಯಾಂಕರ್ ಜತೆ ಆನಂದ್ ಸಿಂಗ್ ಅವರ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ ಆನಂದ ಸಿಂಗ್ ಅವರ ಟ್ಯಾಂಕರ್ ನೀರು ಪೂರೈಕೆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆದ್ದರಿಂದ ಶಾಸಕ ಗವಿಯಪ್ಪ ಅಸಮಾಧಾನಗೊಂಡು ಪೌರಾಯುಕ್ತರ ಮೂಲಕ ನೀರು ಪೂರೈಕೆ ತಡೆದಿದ್ದಾರೆ ಎಂದು ದೂರುತ್ತಾರೆ ನಗರಸಭೆ ಸದಸ್ಯರು. ಅಲ್ಲದೆ ಪೌರಾಯುಕ್ತರ ನಡೆ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರು ಬಿಡುವುದು ನಗರಸಭೆಗೆ ಸಂಬಂಧಿಸಿದ ವಿಚಾರ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ಆದರೂ ನನ್ನ ಹೆಸರನ್ನು ಯಾಕೆ ಎಳೆದು ತರುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಜನರಿಗೆ ನೀರಿನ ಸಮಸ್ಯೆ ಆಗದಂತೆ ನಗರಸಭೆ ನೋಡಿಕೊಳ್ಳಲಿ.| ಎಚ್.ಆರ್.ಗವಿಯಪ್ಪ ಶಾಸಕ, ವಿಜಯನಗರ
ಶಾಸಕ ಎಚ್.ಆ‌ರ್.ಗವಿಯಪ್ಪ ಅವರು ನನ್ನ ನೀರಿನ ಟ್ಯಾಂಕರ್ ಟಾರ್ಗೆಟ್ ಮಾಡಿದ್ದಾರೆ. ನಾನು 2004 ರಿಂದ ಜಲ ಸೇವೆ ಮಾಡುತ್ತಿರುವೆ. ನಾನು ಶಾಸಕ ಆಗಿದ್ದಾಗಲೂ ಗವಿಯಪ್ಪ ನೀರು ಸರಬರಾಜು ಮಾಡಿದ್ದಾರೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ಅವರು ಪ್ರತಿಷ್ಠೆ ಬಿಡಲಿ.| ಆನಂದ ಸಿಂಗ್ ಮಾಜಿ ಸಚಿವ
ನಗರಸಭೆ ನಿಯಮದಂತೆ ಕುಡಿವ ನೀರು ಪೂರೈಕೆ ಮಾಡಲಿದೆ. ಟ್ಯಾಂಕರ್‌ಗಳಿಗೆ ನೀರು ಕೊಡಲು ಸೋಮವಾರ ತುರ್ತು ಸಭೆಯಲ್ಲಿ ಠರಾವು ಪಾಸ್ ಮಾಡಲಾಗಿದೆ. ಜಿಲ್ಲಾಧಿಕಾರಿ ಅನುಮೋದನೆ ನೀಡಿದ ನಂತರ ನಗರಸಭೆ ಸದಸ್ಯರ ಬೇಡಿಕೆಯಂತೆ ಖಾಸಗಿ ಟ್ಯಾಂಕರ್ ಗಳಿಗೆ ನೀರು ಬಿಡಲಾಗುವುದು.| ಸಿ.ಚಂದ್ರಪ್ಪ ನಗರಸಭೆ ಪೌರಾಯುಕ್ತ, ಹೊಸಪೇಟೆ