ಹೊಸಪೇಟೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಭೀಮವಾದ ದಲಿತ ಸಂಘರ್ಷ ಸಮಿತಿ ಮತ್ತು ಸ್ಲಂ ಜನರ ಸಂಘಟನೆ-ಕರ್ನಾಟಕ, ಜಿಲ್ಲಾ ಚಲವಾದಿ ಮಹಾಸಭಾ ಸೇರಿದಂಥೆ ವಿವಿಧ ಸಂಘಟನೆಗಳಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಅಮಿತ್ ಶಾ ಭಾವಚಿತ್ರಕ್ಕೆ ಪಾದರಕ್ಷೆಗಳಿಂದ ಹೊಡೆದು, ಭಾವಚಿತ್ರಗಳನ್ನು ಸುಟ್ಟು ಹಾಕಿದರು. ಅಂಬೇಡ್ಕರ್ ಅವರಿಂದಲೇ ಸತತವಾಗಿ ಮೂರು ಬಾರಿ ದೇಶದ ಗೃಹ ಮಂತ್ರಿಗಳಾಗಿದ್ದೀರಿ ಎಂಬುದನ್ನು ಮರೆತಂತಿದೆ. ಕೂಡಲೇ ಪ್ರಧಾನಮಂತ್ರಿಗಳು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ರಾಷ್ಟçಪತಿಗಳು ಮಧ್ಯ ಪ್ರವೇಶಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂಬೇಡ್ಕರ್ ಬಗ್ಗೆ ಮಾತಾಡಿದರೆ ಸಹಿಸಲ್ಲ. ನಾವು ಜೈ ಶ್ರೀರಾಮ್ ಬದಲು ಜೈ ಭೀಮ್ ಕೂಗುತ್ತೇವೆ ಎಂದರು.
ಬಿಜೆಪಿ ಪಕ್ಷ ಚುನಾವಣೆ ಬರುವ ಸಂದರ್ಭದಲ್ಲಿ ಅಂಬೇಡ್ಕರ್ ಹೆಸರು ಹೇಳಿ ನಮ್ಮನ್ನು ಬಳಸಿಕೊಂಡು, ಅಧಿಕಾರ ದಕ್ಕಿದ ಮೇಲೆ ಅವಮಾನಿಸುತ್ತಾರೆ. ಇದೇ ರೀತಿ ಹಲವಾರು ಬಾರಿ ಬಿಜೆಪಿ ಪಕ್ಷದ ನಿಜವಾದ ಬಣ್ಣ ಪದೇ ಪದೇ ಬಯಲಾಗುತ್ತಿದೆ. ಬಿಜೆಪಿಯಲ್ಲಿರುವ ಅಂಬೇಡ್ಕರ್ ಪರವಾಗಿರುವ ಎಲ್ಲರೂ ಹೊರಗೆ ಬರಬೇಕು. ಇವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಸೋಮಶೇಖರ್ ಬಣ್ಣದಮನೆ, ಸಣ್ಣ ಮಾರೆಪ್ಪ, ರಾಮಚಂದ್ರ, ಪೂಜಾರಿ ದುರುಗಪ್ಪ, ರಾಮಕೃಷ್ಣ, ಪ್ರಕಾಶ್, ಶಿವಕುಮಾರ್, ಸ್ಲಂ ವೇಂಕಟೇಶ್, ವಾಸುದೇವ್, ರ‍್ರಿಸ್ವಾಮಿ, ಗಿರೀಶ್, ರಮೇಶ್, ಸಣ್ಣ ಈರಪ್ಪ ಸೇರಿದಂತೆ ಇತರರಿದ್ದರು.