ಜಿಲ್ಲೆ

ವೈದ್ಯರು, ಡಿ ದರ್ಜೆ ಸಿಬ್ಬಂದಿ ನೇಮಕಕ್ಕೆ ಕ್ರಮ: ಹೊಸಪೇಟೆಯಲ್ಲಿ ಸಚಿವ ಆನಂದ ಸಿಂಗ್ ಮಾಹಿತಿ

ಹೊಸಪೇಟೆ: ನಗರದ ಎಂಸಿಎಚ್ ಕೋವಿಡ್ ಆಸ್ಪತ್ರೆ ಹಾಗೂ ಉಪವಿಭಾಗದಲ್ಲಿನ ಕೋವಿಡ್ ವಾರ್ಡ್‌ಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಸಿಸಿ ಕ್ಯಾಮರಾ ಮೂಲಕ ಸೋಂಕಿತರನ್ನು ವೀಕ್ಷಿಸಿದರು.

ಉಪವಿಭಾಗ ಆಸ್ಪತ್ರೆಯ ಹೆರಿಗೆ ವಿಭಾಗದ ಮುಂಭಾಗದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪಾಗಿ ನಿಂತಿರುವುದನ್ನು ಗಮನಿಸಿದ ಸಚಿವರು, ನೀವು ಚಿಕಿತ್ಸೆಗೆ ಬಂದಿರುವವರ ಎಂದು ಪ್ರಶ್ನಿಸಿದರು. ರೋಗಿ ಸಂಬಂಧಿಕರು ಎಂದಾಗ ಇಲ್ಲಿ ಗುಂಪು ಸೇರುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಮೊದಲು ಹೊರಗೆ ತೆರಳಿ, ಇಷ್ಟೊಂದು ಜನರನ್ನು ಆಸ್ಪತ್ರೆ ಒಳಗೆ ಸೇರಿಸದಂತೆ ಆಸ್ಪತ್ರೆ ಆಡಳಿತಾಧಿಕಾರಿ ಸಲೀಂಗೆ ಸಚಿವರು ಸೂಚಿಸಿದರು. ಆಕ್ಸಿಜನ್ ಸಿಲಿಂಡರ್‌ಗಳು ಖಾಲಿಯಾಗುವ ಮೊದಲೇ ಪರ್ಯಾಯ ಟ್ಯಾಂಕ್‌ಗಳನ್ನು ತರುವ ವ್ಯವಸ್ಥೆ ಮಾಡಬೇಕು ಎಂದೂ ಸೂಚನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಂದಾಲ್‌ನಿಂದ ಶುಕ್ರವಾರ 900 ಟನ್ ಆಕ್ಸಿಜನ್ ಉತ್ಪಾದನೆಯಾಗಿದ್ದು, ಈ ಪೈಕಿ 800 ಟನ್ ಆಕ್ಸಿಜನ್ ಅನ್ನು ರಾಜ್ಯಕ್ಕೆ ಕೊಟ್ಟಿದ್ದಾರೆ. ತಾಲೂಕಿನಲ್ಲಿ ಕರೊನಾ ನಿಯಂತ್ರಣ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಅವಲೋಕಿಸಲು ಆಸ್ಪತ್ರೆಗೆ ಭೇಟಿ ನೀಡಲಾಗಿದೆ. ಕೆಲ ಲೋಪದೋಷಗಳಿದ್ದು, ವೈದ್ಯರು, ಡಿ ಗ್ರೂಪ್ ಸಿಬ್ಬಂದಿ ನೇಮಕಕ್ಕೂ ಕ್ರಮವಹಿಸಲಾಗಿದೆ. ಉಪ ವಿಭಾಗ ಆಸ್ಪತ್ರೆ ಬದಲಿಗೆ ಬೇರೆಡೆ ವ್ಯಾಕ್ಸಿನ್ ಹಾಕಲು ವೈದ್ಯಾಧಿಕಾರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕೂಡ್ಲಿಗಿ, ಹರಪನಹಳ್ಳಿ, ಕೊಟ್ಟೂರು, ಹಡಗಲಿ ಭಾಗದಲ್ಲಿ ಸಿಬ್ಬಂದಿ ಕೊರತೆ ಇದೆ. ಈಗಾಗಲೇ ತಾತ್ಕಾಲಿಕ ನೇಮಕಕ್ಕೆ ಸಂದರ್ಶನ ನಡೆಯುತ್ತಿದೆ. ಮೇ 10ಕ್ಕೆ ಬಳ್ಳಾರಿಯಲ್ಲಿ ಸಭೆ ಕರೆದಿದ್ದು, ನೇಮಕ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ, ಎಸ್ಪಿ ಸೈದುಲು ಅದಾವತ್, ಎಸಿ ಸಿದ್ದರಾಮೇಶ್ವರ, ತಹಸೀಲ್ದಾರ್ ಎಚ್.ವಿಶ್ವನಾಥ, ನಗರಸಭೆ ಆಯುಕ್ತ ಮನ್ಸೂರ್ ಅಲಿ, ಡಿಎಚ್‌ಒ ಎಚ್.ಎಲ್.ಜನಾರ್ದನ್, ಟಿಎಚ್‌ಒ ಭಾಸ್ಕರ್ ಇತರರಿದ್ದರು.

ಹೋಂ ಐಸೋಲೇಷನ್‌ನಲ್ಲಿ ಇರುವ ಸೋಂಕಿತರು ಮಾರ್ಗಸೂಚಿಗಳನ್ನು ಉಲ್ಲಂಘಿಸದಂತೆ ರ‌್ಯಾಪಿಡ್ ಟೀಂ ನಿಗಾವಹಿಸಲಾಗಿದೆ. ಸೋಂಕಿತರೂ ಮನೆಯಿಂದ ಹೊರಬಾರದೆ ಎಚ್ಚರದಿಂದ ಇರಬೇಕು.| ಆನಂದ ಸಿಂಗ್ಜಿಲ್ಲಾ ಉಸ್ತುವಾರಿ ಸಚಿವ