ಸ್ವಾತಂತ್ರ್ಯ ಸೇನಾನಿಗಳಾದ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಹುತಾತ್ಮ ದಿನಾಚರಣೆ ನಿಮಿತ್ತ ಎಸ್‌ಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರು ಹೊಸಪೇಟೆಯಲ್ಲ ಗುರುವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿದರು.  
ಜಿಲ್ಲೆ

ಹುತಾತ್ಮ ದಿನಾಚರಣೆ ನಿಮಿತ್ತ ಪಂಜಿನ ಮೆರವಣಿಗೆ

ಶಶಿಧರ ಎಲ್

ಹೊಸಪೇಟೆ: ಸ್ವಾತಂತ್ರ್ಯ ಸೇನಾನಿಗಳಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಹುತಾತ್ಮ ದಿನಾಚರಣೆ ನಿಮಿತ್ತ ಎಸ್‌ಎಫ್‌ಐ, ಡಿವೈಎಫ್‌ಐ ಕಾರ್ಯಕರ್ತರು ಜಂಟಿಯಾಗಿ ನಗರದಲ್ಲಿ ಗುರುವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿದರು.

ನಗರದ ಶ್ರಮಿಕ ಭವನದಿಂದ ಆರಂಭಗೊಂಡು ಮೆರವಣಿಗೆ ವೀರ ಮದಕರಿ ನಾಯಕ ಸರ್ಕಲ್, ನಗರಸಭೆ ಮಾರ್ಗವಾಗಿ ಪುನಃ ಶ್ರಮಿಕ ಭವನಕ್ಕೆ ತಲುಪಿತು ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಆರ್ ಭಾಸ್ಕರ್ ರೆಡ್ಡಿ, ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿವೆ. ಕ್ರಾಂತಿ ಯೋಗಿಗಳಾದ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರ ಜೀವನ ಮೌಲ್ಯಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿವೆ. ಇಂದಿನ ಯುವಕರು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಶ್ರಮಿಕ ಭವನ ಸಮೀಪದ ವೃತ್ತಕ್ಕೆ ಭಗತ್ ಸಿಂಗ್ ವೃತ್ತ ಎಂದು ಘೋಷಿಸಬೇಕು ಎಂದರು.

ಜಿಲ್ಲಾ ಕಾರ್ಯದರ್ಶಿ ಈಡಿಗರ ಮಂಜುನಾಥ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಮೂವರೂ ಕ್ರಾಂತಿ ಯೋಗಿಗಳು 23 ವಯಸಿನಲ್ಲೇ ಪ್ರಾಣ ತ್ಯಾಗ ಮಾಡಿದರು. ಯುವ ಜನರೇ ದೇಶದ ಚುಕ್ಕಾಣಿ ಹಿಡಿಯಬೇಕು. ಭ್ರಷ್ಟ ರಾಜಕಾರಣಿಗಳ ಕಪಿ ಮುಷ್ಟಿಯಿಂದ ದೇಶವನ್ನು ಮುಕ್ತಗೊಳಿಸಬೇಕು ಎಂದರು.

ಪ್ರಮುಖರಾದ ಮಂಜುನಾಥ್ ಸಿ., ತಾಲೂಕು ಅಧ್ಯಕ್ಷ ಮಹಮದ್ ಖಾಲೀದ್, ಮಾಲತೇಶ್, ರೆಹಮಾನ್ ಲೋಕೇಶ್, ಮಂಜುನಾಥ್ ಟಿ., ಸುಧಾಕರ್, ಮಂಜುನಾಥ್ ಎಲ್., ತಾಯಪ್ಪ ನಾಯಕ ಇತರರು ಇದ್ದರು.