ಜಿಲ್ಲೆ

ಎರಡನೇ ಮದುವೆ ಮಹಿಳೆಗೆ ಜೈಲು ಶಿಕ್ಷೆ

ಹೊಸಪೇಟೆ: ತನ್ನ ಗಂಡನಿದ್ದರೂ ಎರಡನೇ ಮದುವೆಯಾದ ಮಹಿಳೆಗೆ ಇಲ್ಲಿನ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಎರಡು ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿದೆ.

ನಗರದ ಟಿಬಿಡ್ಯಾಂನ ದೇವಿಕಾ ಎಂಬ ಮಹಿಳೆಗೆ ಪತಿ ಹಾಗೂ ಇಬ್ಬರು ಮಕ್ಕಳಿದ್ದರೂ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಆಲಹಳ್ಳಿ ಗ್ರಾಮದ ಅಂಬರೀಶ್ ಎಂಬವನೊAದಿಗೆ 2014ರ ಜ.25ರಂದು ಮದುವೆಯಾಗಿದ್ದರು. ಅಲ್ಲದೇ 2014ರ ಮಾ.06ರಂದು ಭಾಲ್ಕಿ ಉಪ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಕೂಡ ಮಾಡಿಸಲಾಗಿತ್ತು.

ಈ ಕುರಿತು ಟಿಬಿಡ್ಯಾಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣೆಯ ಅಂದಿನ ಎಎಸ್‌ಐ ಜಿ.ಟಿ.ನಾಗರಾಜ, ಪಿಎಸ್‌ಐಗಳಾದ ವಸಂತಕುಮಾರ, ಯರಿಸ್ವಾಮಿಯವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇಲ್ಲಿನ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಅಶೋಕ್ ಆರ್.ಎಚ್. ಅವರು ಪ್ರಕರಣದ ವಿಚಾರಣೆ ನಡೆಸಿ, ದೇವಿಕಾ ಅಪರಾಧ ಎಸಗಿರುವುದು ರುಜುವತ್ತಾಗಿದೆ ಎಂದು ಐಪಿಸಿ ಕಲಂ 494 ಅಡಿಯಲ್ಲಿ 2 ವರ್ಷ ಸಾದಾ ಜೈಲು ವಾಸ ಮತ್ತು ಐದು ಸಾವಿರ ರೂ. ಜುಲ್ಮಾನೆ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲವಾದ್ದಲ್ಲಿ ಒಂದು ತಿಂಗಳು ಸಾದಾ ಜೈಲು ಶಿಕ್ಷೆ ಹೆಚ್ಚುವರಿಯಾಗಿ ಅನುಭವಿಸತಕ್ಕದ್ದು ಎಂದು ತೀರ್ಪು ನೀಡಿದ್ದಾರೆ. ಪ್ರಕರಣದ ಇನ್ನುಳಿದ ಆರೋಪಿತರ ವಿರುದ್ಧ ಆರೋಪ ಸಾಬೀತಾಗಿಲ್ಲ ಎಂದು ಪ್ರಕರಣದಿಂದ ಬಿಡುಗಡೆ ಮಾಡಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕ ಎಂ.ಟಿ.ರೇವಣಸಿದ್ದಪ್ಪ ವಾದ ಮಂಡಿಸಿದ್ದಾರೆ.