ಜಿಲ್ಲೆ

ಹೊಸಪೇಟೆ-ಮಂಗಳೂರಿಗೆ ರೈಲು ಆರಂಭಿಸಿ

ಮಂಜುನಾಥ

ಹೊಸಪೇಟೆ: ವಿಜಯನಗರ ರೈಲ್ವೇ ಅಭಿವೃದ್ದಿ ಕ್ರಿಯಾ ಸಮಿತಿ ನಿಯೋಗ ನಗರದ ನಿಲ್ದಾಣಕ್ಕೆ ಗುರುವಾರ ಭೇಟಿ ನೀಡಿದ ನೈರುತ್ಯ ರೈಲ್ವೇ ವಲಯ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾತ್ಸವ್‌ಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಪತ್ರ ಸಲ್ಲಿಸಿದರು.

ನೈರುತ್ಯ ರೈಲ್ವೇ ವಲಯ ಬಳಕೆದಾರರ ಸಲಹಾ ಸಮಿತಿ ಸದಸ್ಯ ಬಾಬುಲಾಲ್ ಜೈನ್ ಮಾತನಾಡಿ, ನಗರದಿಂದ ಕೊಟ್ಟೂರು ಮಾರ್ಗವಾಗಿದ್ದು, ಮಂಗಳೂರಿಗೆ ನೂತನ ರೈಲು ಆರಂಭಿಸುವ ಅಗತ್ಯವಿದೆ. ಪ್ರವಾಸಿ ತಾಣ ಹಂಪಿಯಿಂದ ಹಾಸನ, ಶ್ರವಣಬೆಳಗೋಳ, ಬೇಲೂರು, ಹಳೇಬೀಡು, ಮತ್ತು ಧಾರ್ಮಿಕ ಕೇಂದ್ರಗಳಾದ ಕುಕ್ಕೆಸುಬ್ರಮಣ್ಯ, ಧರ್ಮಸ್ಥಳಕ್ಕೆ ನೇರ ಸಂಪರ್ಕ ದೊರೆಯುತ್ತದೆ. ಮಂಗಳೂರಿಗೆ ಸಂಪರ್ಕ ದೊರೆಯುವುದರಿಂದ ಕರಾವಳಿ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳ ಬೆಳವಣಿಗೆಗೆ ಸಹಕಾರಿ ಆಗಲಿದೆ. ಅಮೃತ್ ಭಾರತ್ ಯೋಜನೆ ಅಡಿ ನಗರ ರೈಲ್ವೇ ನಿಲ್ದಾಣ ಅಭಿವೃದ್ದಿಯಾಗುತ್ತಿದ್ದು, ಹೆಚ್ಚುವರಿಯಾಗಿ ಎರಡು ನೂತನ ಪ್ಲಾಟ್‌ಫಾರಂಗಳನ್ನು ನಿರ್ಮಿಸಬೇಕು. ಇಲ್ಲಿ ಪ್ಯಾಸಿಂಜರ್ ಕೋಚ್‌ಗಳ ನಿರ್ವಹಣೆ ಮತ್ತು ನೂತನ ಪ್ಯಾಸಿಂಜರ್ ರೈಲುಗಳ ಆರಂಭಕ್ಕೆ ಅನುಕೂಲವಾಗುವಂತೆ. ಪಿಟ್‌ಲೈನ್ ವ್ಯವಸ್ತೆ, ಹಾಗೂ ಪ್ರಯಾಣಿಕರಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ವ್ಯವಸ್ಥಾಪಕ ಅರವಿಂದ ಶ್ರೀವಾತ್ಸವ್ ಪ್ರತಿಕ್ರಿಯಿಸಿ, ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುತ್ತಿರುವ ವಿಜಯಪುರ-ಮಂಗಳೂರು ರೈಲನ್ನು ವಾರದಲ್ಲಿ ಮೂರು ದಿನ ಹೊಸಪೇಟೆ-ಕೊಟ್ಟೂರು ಮಾರ್ಗವಾಗಿ ಸಂಚರಕ್ಕೆ ಪರಿಶೀಲಿಸಲಾಗುತ್ತದೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಬಮೇಳದ ಮುಕ್ತಾಯದ ನಂತರ ರದ್ದಾಗಿರುವ ಬೆಳಗಾವಿ-ಹೈದರಾಬಾದ್-ಮಣಗೂರು ಹಾಗೂ ಹುಬ್ಬಳ್ಳಿ-ತಿರುಪತಿ ರೈಲುಗಳನ್ನು ಪುನರ್ ಆರಂಭಿಸಲಾಗುತ್ತದೆ. ಹೊಸಪೇಟೆ ರೈಲು ನಿಲ್ದಾಣ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಇಲಾಖೆಯ ಸ್ಥಾನಿಕಾಧಿರಿಗಳಾದ ಸಂತೋಷ್ ಕುಮಾರ್ ಹೆಗಡೆ, ಸುನೀಲ್, ಪ್ರವೀಣ್ ಕುಮಾರ್, ಹುಡಾ ಮಾಜಿ ಅಧ್ಯಕ್ಷ ಅಶೋಕ್ ಜೀರೆ, ಪ್ರರಮುಖರಾದ ವೈ.ಯಮುನೇಶ್, ಮಹೇಶ್ ಕುಡುತಿನಿ, ಪ್ರೋ.ಉಮಾಮಹೇಶ್ವರ್, ಟಿ.ಆರ್.ತಿಪ್ಪೇಸ್ವಾಮಿ, ಡಿ.ರಾಮಕೃಷ್ಣ, ನಜೀರ್ ಸಾಬ್, ಕೆ.ಗೋಪಿನಾಥ್, ಜಿ.ದೇವರೆಡ್ಡಿ, ಜೆ.ವರುಣ್ ಇತರರಿದ್ದರು.