ಜಿಲ್ಲೆ

ಮಾಚಿದೇವರ ಸಂದೇಶ ಆದರ್ಶವಾಗಲಿ

ಮಂಜುನಾಥ

ಹೊಸಪೇಟೆ: ವಿಶಾಲ ಮನೋಧರ್ಮ ಮಡಿವಾಳ ಸಮುದಾಯದ ಜನರಲ್ಲಿದೆ. ಶಿವಶರಣ ಮಾಚಿದೇವರ ಮಾರ್ಗದರ್ಶನದಿಂದ ಮುನ್ನಡೆಯುತ್ತಿರುವುದೇ ಇದಕ್ಕೆ ಕಾರಣ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾಚಿದೇವ ಸಮಾಜದ ಕೊಳಕು ತೊಳೆದು ಹಾಕಿದವರು. ಕಾಯಕದ ಆಧಾರದಲ್ಲಿ ವಿಭಜನೆ ಆಗುತ್ತಿರುವ ಸಮಾಜಕ್ಕೆ ಮಾಚಿದೇವರ ಸಂದೇಶ ಆದರ್ಶವಾಗಬೇಕಾದ ಅಗತ್ಯವಿದೆ. ಶಿವ ಶರಣರು, ವಚನಕಾರರು ಸಮಾಜದ ಶಾಶ್ವತ ಆಸ್ತಿ. ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಜತೆಗೆ ಜ್ಞಾನ ವಿಸ್ತರಣೆಗೆ ಅವರು ನೀಡಿದ ಕೊಡುಗೆ ಮಹತ್ತರವಾದುದು. ಮೌಢ್ಯಗಳಿಂದ ದೀನರ ಶೋಷಣೆ ನಡೆಯುತ್ತಿದ್ದ ಕಾಲದಲ್ಲಿ ಮಾಚಿದೇವ ಜಾಗೃತಿಯ ಮೂಲಕ ಶೋಷಣೆ ತಡೆಗಟ್ಟಿದರು. ಕಷ್ಟಗಳನ್ನು ಸಹಿಸಿಯೂ ಬಡ ಜನರ ಉದ್ಧಾರಕ್ಕೆ ಮಾರ್ಗದರ್ಶಕರಾದರು ಎಂದರು.

ಜಿಲ್ಲಾಧಿಕಾರಿ ಕಚೇರಿ ತಹಸೀಲ್ದಾರ್ ಮೇಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್, ಜಿಪಂ ಡಿಎಸ್ ತಿಮ್ಮಪ್ಪ ಇತರರಿದ್ದರು.