ಹೊಸಪೇಟೆ: ಅಂಗವಿಕಲರು ತಮ್ಮ ಕಾಲ ಮೇಲೆ ನಿಂತು ಸ್ವಾವಲಂಬಿ ಆಗಬೇಕು ಎಂಬುದು ಈ ಶಿಬಿರಗಳ ಆಶಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ಎಂಎಸ್‌ಪಿಎಲ್ ಹಾಗೂ ಭಗವಾನ್ ಮಹಾವೀರ್ ಜೈಪುರ್ ಅಂಗವಿಕಲ ಸಹಕಾರಿ ಸಮಿತಿಯಿಂದ ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ಉಚಿತ ಕೃತಕ ಕಾಲುಜೋಡಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಂಗವಿಕಲರಲ್ಲಿ ಆತ್ಮವಿಶ್ವಾಸ ಮುಖ್ಯ. ತಮ್ಮ ಅಂಗ ವೈಫಲ್ಯ ಒಂದು ಹೊರತು ಪಡಿಸಿದರೆ ಯಾವುದರಲ್ಲಿ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಬೇಕಾಗಿದೆ. ಪ್ರತಿಯೊಬ್ಬರಿಗೂ ಸೇವಾ ಮಾನುಭಾವ ಇರಬೇಕು. ಹಣ ಎಂಬುವುದು ಒಂದು ಭಾಗ ಮಾತ್ರ. ಆದರೆ ಇನ್ನೊಬ್ಬರ ಮುಖದಲ್ಲಿ ನಗು ನೋಡುವುದೇ ನಿಜವಾದ ಸಾಧನೆ ಎಂದರು.
ಸAಸ್ಥೆಯ ಮುಖ್ಯಸ್ಥೆ ಚಿತ್ರದೇವಿ ಬಲ್ಡೋಟ ಮಾತನಾಡಿ, ಶಿಬಿರಕ್ಕೆ ಬಂದಿರುವ ಫಲಾನುಭವಿಗಳನ್ನು ಪರಿಶೀಲಿಸಿ ಕೃತಕ ಕಾಲಿನ ಅವಶ್ಯಕತೆ ಇದ್ದವರಿಗೆ ಹೊಂದಿಕೊಳ್ಳುವ ರೀತಿಯಂತೆ ಅಳತೆ ತೆಗೆದು ಅವರಿಗೆ ಒಗ್ಗುವ ಹಾಗೂ ಒಪ್ಪುವ ರೀತಿಯಲ್ಲಿ ಕೃತಕ ಕಾಲುಗಳನ್ನು ತಯಾರಿಸಲಾಗುವುದು. 11 ವರ್ಷಗಳಿಂದ ಈ ಶಿಬಿರವನ್ನು ಆಯೋಜಿಸುತ್ತಿದ್ದೇವೆ. ಶಿಬಿರದಲ್ಲಿ ಪಾಲ್ಗೊಳ್ಳುವವರಿಂದ ಯಾವುದೇ ರೀತಿಯ ಶುಲ್ಕ ಪಡೆಯುತ್ತಿಲ್ಲ. ಯಾವ ಭಾಗದವರು, ಯಾರು ಬೇಕಾದರೂ ಶಿಬಿರದಲ್ಲಿ ಭಾಗವಹಿಸಿ ಕೃತಕ ಕಾಲು ಜೋಡಿಸಿಕೊಳ್ಳಬಹುದು ಎಂದರು.
ಸAಸ್ಥೆಯ ಅಧ್ಯಕ್ಷ ನರೇಂದ್ರ ಕುಮಾರ್ ಬಲ್ಡೋಟ ಅಧ್ಯಕ್ಷತೆ ವಹಿಸಿದರು. ಭಗವಾನ್ ಮಹಾವೀರ್ ಜೈಪುರ್ ಅಂಗವಿಕಲ ಸಹಕಾರಿ ಸಮಿತಿಯ ಮುಖ್ಯಸ್ಥ ಅನಿಲ್ ಸುರಾನಾ ಇದ್ದರು.