ಜಿಲ್ಲೆ

ಕೆಎಸ್ ಆರ್ ಟಿಸಿ ಘಟಕ ವ್ಯವಸ್ಥಾಪಕ ಸೇರಿ ನಾಲ್ಕು ಸಿಬ್ಬಂದಿ ಅಮಾನತ್ತು

ಮಂಜುನಾಥ

ಹೊಸಪೇಟೆ: ನಗರದಲ್ಲಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ ಡಿಪೋದಲ್ಲಿನ ಕಸದ ಹೆಸರಿನಲ್ಲಿ ಗುಜರಿ ಸಾಮಗ್ರಿಗಳನ್ನು ಸಾಗಿಸಲಾಗಿರ ಬಹುದು ಎಂಬ ಆರೋಪಕ್ಕೆ ಘಟಕ ವ್ಯವಸ್ಥಾಪಕ ಸೇರಿದಂತೆ ನಾಲ್ಕು ಜನ ಅಧಿಕಾರಿಗಳಿಗೆ ಕಲಬುರಗಿಯ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ವಿಚಾರಣಾ ಪೂರ್ವ ಅಮಾನತ್ತು ಆದೇಶಿಸಿದ್ದಾರೆ.

ಕರಾಸಾ ಹವಿಲ್ದಾರ್ ಇಬ್ರಾಹಿಂ, ಘಟಕ ವ್ಯವಸ್ಥಾಪಕ ಮರಿಲಿಂಗಪ್ಪ, ವಿಭಾಗೀಯ ಭದ್ರತಾ ನಿರೀಕ್ಷಕ (ಪ್ರಸ್ತುತ ರಾಯಚೂರಿನ ಅಂಕಿ ಸಂಖ್ಯೆ ಮೇಲ್ವಿಚಾರಕ) ಜಿ.ರವಿ, ಸಹಾಯಕ ಉಗ್ರಾಣಾಧಿಕಾರಿ (ಪ್ರಸ್ತುತ ಪ್ರಾದೇಶಿಕ ಕಾರ್ಯಾಗಾರ ಯಾದಗಿರಿಗೆ ನಿಯೋಜನೆಯಲ್ಲಿರುವವರು) ತಂಬ್ರಹಳ್ಳಿ ಅಂಗರಾಜು ಅವರನ್ನು ಅಮಾನತ್ತು ಮಾಡಲಾಗಿದೆ.

ಕಕರಸಾ ನಿಗಮದ ನಗರ ಘಟಕದಲ್ಲಿ ಜೂ.04 ಹಾಗೂ ಜೂ.05ರಂದು 06 ಭಾರಿ ಲಾರಿಗಳಲ್ಲಿ ಟೆಂಡರ್ ಕರೆಯದೇ ಕಸ ಎಂದು ವಿಲೇವಾರಿ ಮಾಡದ ಹಾಗೂ ಯಾರಿಗೆ ನೀಡಲಾಗಿದೆ ಎಂಬುದರ ಮಾಹಿತಿ ನೀಡಿಲ್ಲ. ಇದು ಸಂಶಯಕ್ಕೆ ಆಸ್ಪದವಾಗಿರುತ್ತದೆ. ಈ ರೀತಿಯಾಗಿ ನಿಯಮ ಉಲ್ಲಂಘನೆ ಮಾಡಿ ಕಸ ವಿಲೇವಾರಿ ಮಾಡುವ ಸಮಯದಲ್ಲಿ ಅನುಪಯುಕ್ತ ಸಾಮಗ್ರಿಗಳನ್ನು ಸಹ ಸಾಗಾಣೆ ಮಾಡಿರುವುದು ದಾಖಲಾತಿಗಳಿಂದ ದೃಢಪಟ್ಟಿರುತ್ತದೆ. ಕರಾರಸಾ ಸಂಸ್ಥೆಯ ನೌಕರರ ನಿಯಮಾವಳಿ 1971 ರಲ್ಲಿನ ಭಾಗ-2ರ ನಿಯಮ 3 ನ್ನು ಉಲ್ಲಂಘಿಸಿ ಸಂಸ್ಥೆಯ ಘನತೆಗೆ ಕುಂದುಂಟಾಗುವ ರೀತಿಯಲ್ಲಿ ನಡೆದು ಕೊಂಡಿರುತ್ತಾರೆ. ಸಂಸ್ಥೆಯ ನೌಕರರ ನಿಯಮಾವಳಿ 1971 ರ ನಿಯಮಾವಳಿ 19 ರಲ್ಲಿ ಉಲ್ಲೇಖಿಸಲ್ಪಟ್ಟ ಶಿಕ್ಷೆಗಳನ್ನು ವಿಧಿಸಲು ಅರ್ಹವಾದಂತಹ ಗಂಭೀರ ಕರ್ತವ್ಯಲೋಪಗಳನ್ನು ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಕರಣದಲ್ಲಿ ಅಂತಿಮ ವರದಿ/ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ವಿಚಾರಣಾ ಪೂರ್ವ ಅಮಾನತ್ತಿನಲ್ಲಿ ಇರಿಸಲಾಗಿದೆ.