ಹೊಸಪೇಟೆ: ಜಿಲ್ಲೆಯಲ್ಲಿ ಯಥೇಚ್ಛವಾಗಿ ಚಿಲ್ಲರೆ ಅಂಗಡಿಗಳಲ್ಲೂ ಮದ್ಯ ದೊರೆಯುತ್ತಿದ್ದು, ಈ ಅಕ್ರಮಕ್ಕೆ ಕಡಿವಾಣ ಹಾಕಿದ್ದಾರೆ. ಇಲ್ಲಿ ಏಕೆ ಆಗುತ್ತಿಲ್ಲ? ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಸೇರಿ ಶಾಸಕರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮನೆ ಮನೆಗಳಿಗೆ ಹಾಲಿಗಿಂತ ಮದ್ಯ ಜಾಸ್ತಿ ಮಾರಾಟವಾಗುತ್ತಿದೆ. ಅಕ್ರಮ ಮದ್ಯ ಮಾರಾಟ, ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟ್ ಜೂಜಾಟ, ಗಾಂಜಾ, ಅಕ್ರಮ ಮರಳು ದಂಧೆ ಜೋರಾಗಿ ನಡೆಯುತ್ತಿದೆ. ಪೊಲೀಸ್, ಅಬಕಾರಿ, ಆರ್‌ಟಿಒ ಅಧಿಕಾರಿಗಳು ಜಂಟಿಯಾಗಿ ಅಕ್ರಮ ಮರಳು ದಂಧೆ ಹಾಗೂ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಕಡಕ್ಕಾಗಿ ಎಚ್ಚರಿಸಿದರು.
ಸಂಸದ ತುಕಾರಾಂ ಮಾತನಾಡಿ, ಎಲ್ಲಾ ಕಾಯಿಲೆ ಮೂಲವೇ ಕುಡಿಯುವ ನೀರಾಗಿದೆ. ಹಾಗಾಗಿ ಶುದ್ಧ ನೀರು ಒದಗಿಸಬೇಕು. ಮೊದಲು ಹಳ್ಳಿಗಳಿಗೆ ಭೇಟಿ ನೀಡಿ, ಮಾಹಿತಿ ಪಡೆದು, ಕುಡಿವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮವಹಿಸಬೇಕು. ತಾಳೆ ಬಸಾಪುರ ತಾಂಡಾ ಸೇರಿದಂತೆ ಎಲ್ಲೆಲ್ಲಿ ಕುಡಿವ ನೀರಿನ ಸಮಸ್ಯೆಗಳಿವೆ. ಅಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದರು.
ಮನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡಿದವರಿಗೆ 40 ಕೋಟಿ ರೂ. ಕೂಲಿ ಹಣ ಬಾಕಿ ಇದೆ ಎಂದು ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ ಸಭೆಗೆ ತಿಳಿಸುತ್ತಿದ್ದಂತೆಯೇ ಶಾಸಕರಾದ ನೇಮರಾಜ್ ನಾಯ್ಕ ಮತ್ತು ಕೃಷ್ಣ ನಾಯ್ಕ ಅವರು ಮೊದಲು ಜನರಿಗೆ ಕೂಲಿ ಹಣ ಪಾವತಿ ಮಾಡಿ ಎಂದು ತಾಕೀತು ಮಾಡಿದರು. ಜಿಲ್ಲೆಯಲ್ಲಿ ಆಶ್ರಯ ಯೋಜನೆಗಳ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು. ಆಯಾ ತಾಪಂ ಇಒಗಳು ಪ್ರಗತಿ ನೋಟ ನೀಡಬೇಕು ಎಂದು ಸೂಚಿಸಿದರು.