ಜಿಲ್ಲೆ

ಕಮಲ್ ಹಾಸನ್ ಬೇಷರತ್ ಕ್ಷಮೆ ಕೇಳಲಿ

ಮಂಜುನಾಥ

ಹೊಸಪೇಟೆ: ಕನ್ನಡ ಭಾಷೆ ಕುರಿತು ಹಗುರ ಹೇಳಿಕೆ ನೀಡಿದ ತಮಿಳು ಚಿತ್ರ ನಟ ಕಮಲ್ ಹಾಸನ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ವತಿಯಿಂದ ನಗರದ ಪುನೀತ್ ರಾಜಕುಮಾರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಚಿತ್ರ ನಟ ಕಮಲ್ ಹಾಸನ್ ಮೊದಲಿನಿಂದಲೂ ಬರೀ ವಿವಾದಾತ್ಮಕ ಹೇಳಿಕೆಗಳನ್ನೆ ನೀಡುತ್ತಿದ್ದಾರೆ. ತಮಿಳಿನಿಂದ ಕನ್ನಡ ಜನಿಸಿದೆ ಎಂದು ಆಧಾರ ರಹಿತ ಹೇಳಿಕೆ ನೀಡಿದ್ದಾರೆ. ಮೊದಲು ತಮಿಳು ಭಾಷೆ ಹೇಗೆ ಜನಿಸಿತು ಎಂಬುದನ್ನು ಅರಿತುಕೊಳ್ಳಲಿ. ಲಾಬಿ ಮಾಡಿ ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಂಡಿದ್ದಾರೆ. ಆದರೆ, ಕನ್ನಡ ಭಾಷೆಗೆ ಅದರ ಪ್ರಾಚೀನತೆ ಗುರುತಿಸಿ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ನಾವು ತಮಿಳಿಗರಂತೇ ಅಂದಾಭಿಮಾನಿಗಳಲ್ಲ, ನಾವು ಭಾಷಾಭಿಮಾನಿಗಳು. ಕನ್ನಡಿಗರ ಉದಾರತೆಯಿಂದಲೇ ದಕ್ಷಿಣ ಭಾರತದ ನಟರು ಬೆಳೆದಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಮೊದಲು ಅರಿತುಕೊಳ್ಳಲ್ಲಿ. ಕನ್ನಡಕ್ಕೆ ಎಷ್ಟು ಜ್ಞಾನಪೀಠ ದೊರೆತಿದೆ ಮತ್ತು ಬೂಕರ್ ಪ್ರಶಸ್ತಿ ದೊರೆತಿದೆ ಎಂಬುದನ್ನು ಅರಿತುಕೊಳ್ಳಲಿ. ಈ ಕೂಡಲೇ ಕನ್ನಡಿಗರ ಬೇಷರತ್ ಕ್ಷಮೆ ಯಾಚಿಸಬೇಕು. ಈ ನಟ ನಟಿಸಿರುವ ಚಿತ್ರಗಳನ್ನು ಕರ್ನಾಟಕದಲ್ಲಿ ಬಿಡುಗಡೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಜತೆಗೆ ಕಮಲ್ ಹಾಸನ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ, ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ತಾರಿಹಳ್ಳಿ ಹನುಮಂತಪ್ಪ, ಕೆ.ರಾಮಪ್ಪ, ಜಾಕೀರ್, ವಿ. ಸೋಮಪ್ಪ, ಯೋಗ ಲಕ್ಷ್ಮೀ, ಜೆ.ಎಸ್.ಸಲೀಂ ಇತ್ತಿತರರಿದ್ದರು.