ಜಿಲ್ಲೆ

ಬೆಂಗಳೂರಿನಲ್ಲಿ ಅನಿರ್ಧಿಷ್ಟವಾಧಿ ಮುಷ್ಕರ

ಹೊಸಪೇಟೆ: ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.04ರಿಂದ ಗ್ರಾ.ಪಂ. ಸೇವೆಗಳನ್ನು ಸ್ಥಗಿತಗೊಳಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ಧಿಷ್ಟವಾಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎಲ್.ಚಂದ್ರನಾಯ್ಕ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪಿಡಿಒ ಹುದ್ದೆಯನ್ನು ಗ್ರೂಪ್ ಬಿ. ಗೆ ಉನ್ನತೀಕರಿಸಬೇಕು. ಏಳು ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮವನ್ನು ಕೈಬಿಡಬೇಕು. ವರ್ಗಾವಣೆ ನಿಯಮಗಳ ಬದಲಾವಣೆಗೆ ಮುನ್ನ ಸಂಘದ ಸಲಹೆ ಪಡೆಯಬೇಕು.

ಪಿಡಿಒ ಹುದ್ದೆ ಸೃಜನೆಯಾಗಿ 15ನೇ ವರ್ಷವಾದರೂ ಉನ್ನತೀಕರಿಸಿಲ್ಲ. ಹುದ್ದೆಗಳ ಭರ್ತಿ ಮತ್ತು ಪದೋನ್ನತಿಯಲ್ಲಿ ನ್ಯಾಯ ಸಿಕ್ಕಿಲ್ಲ. ಕಳೆದ ಐದು ವರ್ಷಗಳಿಂದ ಪದೋನ್ನತಿ ಇಲ್ಲದೆ ಒಂದೇ ಹುದ್ದೆಯಲ್ಲಿ ಕೆಲಸ. ಗ್ರಾ.ಪಂ.ನಲ್ಲಿ ಕೆಡಿಪಿ ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಭಾಗವಹಿಸಿತ್ತಾರೆ. ಆದರೆ, ಅವರು ಗ್ರೂಪ್ ಬಿ ಮತ್ತು ನಾವು ಸಿ ಆಗಿರುತ್ತೇವೆ ಎಂದರು. ರಾಜ್ಯ ಜಂಟಿ ಕಾರ್ಯದರ್ಶಿ ಉಮೇಶ್ ಜಹಗಿರದಾರ ಮಾತನಾಡಿ, ವರ್ಷದಲ್ಲಿ ಸುಮಾರು 21 ಪಿಡಿಒ ಸಾವನ್ನಪ್ಪಿದ್ದಾರೆ. ಕೆಲಸ ಒತ್ತಡದಲ್ಲಿ ನರಳುತ್ತಿದ್ದಾರೆ.

ಗ್ರಾ.ಪಂ.ಗಳಲ್ಲಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಜಿಲ್ಲಾ ಪಂಚಾಯಿತಿ ಎಫ್‌ಡಿಎ ಹುದ್ದೆಗಳಿಗೆ ಪರಿಗಣಿಸಬೇಕು. ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಕರವಸೂಲಿಗಾರ, ನೀರುಗಂಟಿ, ಜವಾನರು, ಸ್ವಚ್ಛತಾಗಾರರನ್ನು ಪದೋನ್ನತಿ ಸಿಗದೆ ಕೊನೆಯ ಐದು ವರ್ಷಗಳ ನಿವೃತ್ತಿ ಹಂತದಲ್ಲಿ ಗ್ರೇಡ್-2 ಕಾರ್ಯದರ್ಶಿ ಸಮಾನಂತರ ವೇತನ ಶ್ರೇಣಿ ನಿಗದಿಸಬೇಕು. ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪತ್ರಾಂಕಿತ ಅಧಿಕಾರಿಗಳ ಸಂಘದ ನಾನಾ ಬೇಡಿಕೆಗಳ ಈಡೇರಿಕೆಗೆ ಮುಷ್ಕರಕ್ಕೆ ರಾಜ್ಯಾದ್ಯಂತೆ ಕರೆ ನೀಡಲಾಗಿದೆ ಎಂದರು.