ಜಿಲ್ಲೆ

ಮಾನವ ಸರಪಳಿ ಅಗತ್ಯ ಸಿದ್ಧತೆ

ಮಂಜುನಾಥ

ಹೊಸಪೇಟೆ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳುತ್ತಿರುವ ಮಾನವ ಸರಪಳಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಪ್ರಜಾಪ್ರಭುತ್ವದ ಏಕತೆ, ಸದೃಢತೆ, ಸಾಮರಸ್ಯ ಸಾರುವ ಸಂಕೇತವಾಗಿ ಮಾನವ ಸರಪಳಿ ರೂಪಿಸುವ ಮೂಲಕ ಬೃಹತ್ ಸಂವಿಧಾನದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸೆ.15ರಂದು ರಾಜ್ಯಾದ್ಯಂತ ನಡೆಯಲಿರುವ ಈ ಐತಿಹಾಸಿಕ ಮಾನವ ಸರಪಳಿ ಕಾರ್ಯಕ್ರಮ ಜಿಲ್ಲೆಯಲ್ಲಿ ನಡೆಯಲಿದೆ. ಡಿಬಿ ಡ್ಯಾಂಬಳಿಯ ಗಣೇಶ ಗುಡಿಯಿಂದ ಅರಂಭವಾಗಿ ತಾಲೂಕಿನ ಭುವನಹಳ್ಳಿಯವರೆಗೆ ಅಂದಾಜು 40 ಕಿ.ಮೀ ಉದ್ದ ಸರಪಳಿ ನಿರ್ಮಾಣ ಆಗಲಿದೆ.

ಈ ಮಾನವ ಸರಪಳಿ ರಚನೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಬೇಕಿದೆ. ಇದಕ್ಕಾಗಿ ಪ್ರೌಢಶಾಲೆ, ಹಾಸ್ಟೆಲ್ ಮತ್ತು ಕಾಲೇಜು ವಿದ್ಯಾರ್ಥಿಗಳು, ಸಂಜೀವಿನಿ, ಎನ್.ಆರ್.ಎಲ್.ಎಂ ಹಾಗೂ ಸ್ವಸಹಾಯ ಸಂಘಗಳ ಸದಸ್ಯರು, ಜಿಲ್ಲೆಯ ಎನ್.ಜಿ.ಓ.ಗಳು ಮತ್ತು ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಾನವ ಸರಪಳಿಯ ಯಶಸ್ವಿ ನಿರ್ವಹಣೆಗಾಗಿ ಪ್ರತಿ 100 ಮೀಟರ್‌ಗೆ ಒಬ್ಬರನ್ನು ಸೆಕ್ಟರ್ ಅಧಿಕಾರಿ, ಒಂದು ಕಿ.ಮೀ.ಗೆ ತಾಲೂಕ ಮಟ್ಟದ ಅಧಿಕಾರಿ, ಮತ್ತು ಪ್ರತಿ 3 ಕಿಮೀಗೆ ಜಿಲ್ಲಾ ಮಟ್ಟದ ಅಧಿಕಾರಿ ನೇಮಕಮಾಡಲಾಗಿದೆ. ಮಕ್ಕಳಿಗೆ ಸುರಕ್ಷಿತವಾಗಿ ಕರೆತರಲು ಶಾಲಾ ವಾಹನಗಳ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೇ ಮಾನವ ಸರಪಳಿಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಕುಡಿವ ನೀರು ಸೇರಿದಂತೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಬೆಳಗ್ಗೆ 9.57 ರಿಂದ 9:59 ರವರೆಗೆ ಮಾನವ ಸರಪಳಿಯಲ್ಲಿ ಕೈ-ಕೈ ಹಿಡಿದು ನಿಲ್ಲುತ್ತಾರೆ.

ನಗರದ ಡಾ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಪ್ರಸ್ತಾವನೆ ಓದುವ ಕಾರ್ಯಕ್ರಮ ಅಯೋಜಿಸಲಾಗಿದೆ. ಕಾರ್ಯಕ್ರಮದ ಎಲ್ಲಾ ಚಿತ್ರೀಕರಣವು ಡ್ರೋನ್ ಕ್ಯಾಮರಾ ಮೂಲಕ ನಡೆಯಲಿದೆ. ಸಂವಿಧಾನದ ಗೌರವ ಮತ್ತು ಘನತೆಯನ್ನು ಎತ್ತಿ ಹಿಡಿಯುವ ಕಾರ್ಯಕ್ರಮ ಇದಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ತಿಳಿಸಿದರು.