ಹೊಸಪೇಟೆ: ಸಂಡೂರಿನ ಅರಣ್ಯ ಪ್ರದೇಶದಲ್ಲಿ ಎರಡು ಹೊಸ ಗಣಿಗಳಿಗೆ ಗುತ್ತಿಗೆ ನೀಡಲು ಸರ್ಕಾರಗಳು ಮುಂದಾಗಿರುವುದು ಸರಿಯಲ್ಲ. ಕೂಡಲೇ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ ಮತ್ತು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಂಪನಿ ಲಿಮಿಟೆಡ್‌ಗೆ ಗಣಿ ಗುತ್ತಿಗೆ ನೀಡುತ್ತಿರುವುದನ್ನು ಕೂಡಲೇ ರದ್ದುಪಡಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಒತ್ತಾಯಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೆಎಂಇಆರ್‌ಸಿಗೆ ಸುಪ್ರೀಂ ಕೋರ್ಟ್ ನೇಮಿಸಿರುವ ನ್ಯಾ. ಬಿ.ಸುದರ್ಶನ ರೆಡ್ಡಿ ಅವರಿಗೂ ಪತ್ರ ಬರೆದು ಒತ್ತಾಯಿಸಲಾಗಿದ್ದು, ಉತ್ಕೃಷ್ಟ ಅರಣ್ಯದಲ್ಲೇ ಗಣಿಗಾರಿಕೆಗೆ ಅವಕಾಶ ನೀಡುತ್ತಿರುವುದು ಸರಿಯಲ್ಲ ಎಂದು ಒತ್ತಾಯಿಸಿದ್ದೇವೆ. ಈ ವಿಚಾರವನ್ನು ಸುಪ್ರೀಂ ಕೋರ್ಟ್ ಗಮನಕ್ಕೂ ತರಲು ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಕೆಐಒಸಿಎಲ್‌ಗೆ 401 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದರಿಂದ 99, 330 ಮರಗಳ ಮಾರಣಹೋಮ ನಡೆಯಲಿದೆ. ಇನ್ನೂ ವಿಐಎಸ್‌ಎಲ್‌ಗೆ 60.7 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತಿದೆ. ಇದರಿಂದ 29,400 ಮರಗಳ ಮಾರಣಹೋಮ ನಡೆಯಲಿದೆ. ಶ್ರೀಗಂಧ, ಔಷಧಿ ಮರಗಳು ಸೇರಿದಂತೆ ಜೀವವೈವಿಧ್ಯತೆಗೆ ಕೊಡಲಿ ಏಟು ಬೀಳಲಿದೆ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡು ಈ ಗಣಿ ಗುತ್ತಿಗೆಗಳನ್ನು ರದ್ದುಪಡಿಸಬೇಕು. ಸಿ-ಕೆಟಗರಿಯ ಗಣಿಗಳಲ್ಲಿ ಪರಿಸರ ಸಂರಕ್ಷಣೆಯೊAದಿಗೆ ಗಣಿಗಾರಿಕೆ ಮಾಡಬಹುದು. ಆದರೆ, ಕಾಡನ್ನೇ ನಾಶ ಮಾಡಿ ಗಣಿಗಾರಿಕೆ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಣಿ ಬಾಧಿತ ಪ್ರದೇಶದ ಪುನಶ್ಚೇತನಕ್ಕಾಗಿ ವಿಜಯನಗರ, ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು 25 ಸಾವಿರ ಕೋಟಿ ರೂ. ಸಂಗ್ರಹವಾಗಿದೆ. ಈಗಾಗಲೇ ಕೆಎಂಇಆರ್‌ಸಿಗೆ ಸುಪ್ರೀಂ ಕೋರ್ಟ್ ನ್ಯಾ. ಬಿ.ಸುದರ್ಶನ ರೆಡ್ಡಿ ಅವರನ್ನು ನೇಮಿಸಿದೆ. ಗಣಿಬಾಧಿತ ಪ್ರದೇಶದ ಜನರ ಒಳಿತಿಗಾಗಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಅನಗತ್ಯ ಯೋಜನೆಗಳನ್ನು ರೂಪಿಸದೇ, ಆ ಭಾಗದ ಜನರ ಸಮಗ್ರ ಅಭಿವೃದ್ಧಿಗಾಗಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಸಮಾಜ ಪರಿವರ್ತನಾ ಸಮುದಾಯದ ಶ್ರೀಶೈಲ ಆಲ್ದಹಳ್ಳಿ, ಜಿ.ಕೆ. ನಾಗರಾಜ, ಸಯ್ಯದ್ ಹೈದರ್ ಇದ್ದರು.