ಹೊಸಪೇಟೆ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ದಲಿತ ಹಾಗೂ ಶೋಷಿತರ ಧ್ವನಿ ಸಂಘಟನೆ ಹಾಗೂ ಹಿಂದುಪರ ಸಂಘಟನೆಯಿAದ ನಗರದ ವಾಲ್ಮೀಕಿ ವೃತ್ತದಲ್ಲಿ ಗುರುವಾರ ಜನಾಂದೋಲನ ಸಭೆ ನಡೆಯಿತು. ನಂತರ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಬಾಂಗ್ಲಾದೇಶದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿನ ಕಾರಣದಿಂದ ಅಲ್ಲಿನ ಪ್ರಧಾನಿ ಶೇಖ್ ಹಸಿನಾ ಪಲಾಯನ ಮಾಡಿದ್ದಾರೆ. ಈ ನಡುವೆ ಬಾಂಗ್ಲಾದೇಶದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ಹಿಂದೂಗಳ ಮೇಲೆ ದೌರ್ಜ*ನ್ಯ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ಇಸ್ಕಾನ್ ಮುಖ್ಯಸ್ಥ ಚಿನ್ಮಯ ಕೃಷ್ಣದಾಸ್ ನನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಗಿದೆ. ರಾಷ್ಟ್ರಧ್ವಜದ ಮೇಲೆ ಇಸ್ಕಾನ್ ಧ್ವಜ ಹಾರಿಸಿದ್ದ ಆರೋಪವನ್ನು ಚಿನ್ಮಯ ಕೃಷ್ಣದಾಸ್ ಮೇಲೆ ಹೊರಿಸಲಾಗಿದೆ. ಬಾಂಗ್ಲಾದೇಶದಲ್ಲಿ ಹಿಂದುಗಳ ರಕ್ಷಣೆ ಆಗಬೇಕಿದೆ. ಬಾಂಗ್ಲಾದಲ್ಲಿ ಹಿಂದುಗಳ ನರಮೇಧ ನಡೆಯುತ್ತಿದೆ. ಇಸ್ಲಾಂ ಜಿಹಾದಿ ಸಂಘಟನೆ ಇದ್ದರೆ ಏನಾಗಬಹುದು ಎಂಬುದಕ್ಕೆ ಬಾಂಗ್ಲಾದೇಶದ ಉದಾಹರಣೆ ನಮ್ಮ ಮುಂದೆ ಇದೆ. ಹಿಂದುಗಳು, ಅಲ್ಪಸಂಖ್ಯಾತರ ಮೇಲೆ ಎರಡು ತಿಂಗಳಲ್ಲಿ ಆರು ಸಾವಿರ ದಾಳಿಗಳು ನಡೆದಿವೆ. ಜಗತ್ತನ್ನು ಇಸ್ಲಾಮೀಕರಣ ಮಾಡಬೇಕೆಂದು ಹಿಂದುತ್ವದ ನಾಶ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಅಲ್ಲಿಯ ಸಂಸ್ಕೃತಿ, ನಾಗರಿಕತೆ, ಪರಂಪರೆ ನಾಶ ಮಾಡಿದೆ. ಭಾರತದ ಹಿಂದೂಗಳಿಗೆ ಇದು ಪಾಠವಾಗಿದೆ. ಭಾರತ ಸರ್ಕಾರವು ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಲಿ, ಹಿಂದುಗಳ ಸ್ವಾಭಿಮಾನ ರಕ್ಷಣೆಯಾಗಲಿ ಎಂದು ಆಗ್ರಹಿಸಿದರು.
ವಾಲ್ಮೀಕಿವೃತ್ತದಲ್ಲಿ ಪ್ರತಿಭಟನಾ ಸಭೆ ನಂತರ ನೆಹರು ಕಾಲೋನಿ, ಎಂಪಿಎAಸಿ ಮಾರುಕಟ್ಟೆ, ಸಾಯಿಬಾಬ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಎಂಎಸ್.ದಿವಾಕರಗೆ ಮನವಿ ಸಲ್ಲಿಸಿದರು.
ಸಂಡೂರು ತಾಲೂಕಿನ ಜೋಗದ ದೇವರಕೊಳ್ಳ ಶ್ರೀ ಅನ್ನಪೂರ್ಣೇಶ್ವರಿ ಮಠದ ದಿಗಂಬರ ಶ್ರೀ ರಾಜ ಭಾರತಿ ಸ್ವಾಮೀಜಿ, ದಲಿತ ಹಾಗೂ ಶೋಷಿತರ ಧ್ವನಿ ಸಂಘಟನೆ ಅಧ್ಯಕ್ಷ ಕಟ್ಟಗಿ ರಾಮಕೃಷ್ಣ, ಭೋಪಾಲ್ ಪ್ರಹ್ಲಾದ್ ಶೆಟ್ಟಿ, ಎನ್.ಟಿ.ರಾಜಣ್ಣ, ಭೋಜಾ, ಅಶೋಕ್ ಜೀರೆ, ನರಸಿಂಹ ಮೂರ್ತಿ ಇತರರಿದ್ದರು.